
ಬರೋಬ್ಬರಿ 25 ವರ್ಷಗಳಿಂದ ಪರಿಷ್ಕರಣೆಯಾಗದ ಶಿವಮೊಗ್ಗ ನಗರ ವ್ಯಾಪ್ತಿ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಡಿ. 26: ಜನಸಂಖ್ಯೆ ಹಾಗೂ ಪ್ರದೇಶಗಳ ಅಭಿವೃದ್ದಿಗೆ ಅನುಗುಣವಾಗಿ, ಕಾಲಕಾಲಕ್ಕೆ ನಗರ – ಪಟ್ಟಣಗಳ ವ್ಯಾಪ್ತಿ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ದೇಶದಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲೊಂದಾದ, ಶಿವಮೊಗ್ಗ ನಗರ ವ್ಯಾಪ್ತಿಯು ಕಳೆದ 25 ವರ್ಷಗಳಿಂದ ಪರಿಷ್ಕರಣೆಯೇ ಆಗಿಲ್ಲ..!
ಆಡಳಿತ ಯಂತ್ರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ, ನಗರ ವ್ಯಾಪ್ತಿ ಪರಿಷ್ಕರಣೆಯ ಪ್ರಮುಖ ಆಡಳಿತಾತ್ಮಕ ವಿಷಯವು ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಇದರಿಂದ ಅಸ್ತವ್ಯಸ್ತವಾಗಿ ನಗರ ಬೆಳೆಯುವಂತಾಗಿದೆ. ಹಾಗೆಯೇ ನಾಗರೀಕರು ಮೂಲಸೌಕರ್ಯ ಸಮಸ್ಯೆಗಳಿಂದ ಪರಿತಪಿಸುವಂತಾಗಿದೆ.
ಕಾಲು ಶತಮಾನ! : 1997-98 ರ ವೇಳೆ ಅಂದಿನ ನಗರಸಭೆ ಆಡಳಿತಾವಧಿಯಲ್ಲಿ, ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಿಸಲಾಗಿತ್ತು. ಗ್ರಾಮ ಪಂಚಾಯ್ತಿ ಅಧೀನದಲ್ಲಿದ್ದ ನಗರದಂಚಿನ ಗ್ರಾಮಗಳಾದ ಗಾಡಿಕೊಪ್ಪ, ಕಾಶೀಪುರ, ಸೋಮಿನಕೊಪ್ಪ, ನವುಲೆ ಸೇರಿದಂತೆ ಮೊದಲಾದ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ತದನಂತರ 2013-14 ರಲ್ಲಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದಾಗ್ಯೂ ಇಲ್ಲಿಯವರೆಗೂ (2023) ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ.
ಬೆಳವಣಿಗೆ : ಸದ್ಯ ನಗರದಂಚಿನ ಗ್ರಾಪಂ ಅಧೀನದಲ್ಲಿ ದೊಡ್ಡ ದೊಡ್ಡ ಬಡಾವಣೆಗಳು ನಿರ್ಮಾಣವಾಗಿವೆ. ಹೊಸ ಹೊಸ ಆರ್ಥಿಕ, ವಾಣಿಜ್ಯ – ವಹಿವಾಟು ಸಂಬಂಧಿತ ಚಟುವಟಿಕೆಗಳು ಅಭಿವೃದ್ದಿಯಾಗಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ.
ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗುವ ಅರ್ಹತೆ ಹೊಂದಿದ್ದರೂ ಗ್ರಾಪಂ ಅಧೀನದಲ್ಲಿಯೇ ಬಡಾವಣೆಗಳಿವೆ. ಆದರೆ ಸ್ಥಳೀಯ ಗ್ರಾಮ ಪಂಚಾಯ್ತಿ ಆಡಳಿತಗಳಿಂದ, ಸಮರ್ಪಕವಾಗಿ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾಗರೀಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಪಾಲಿಕೆ ವಾರ್ಡ್ ಸಂಖ್ಯೆ ಹೆಚ್ಚಳಕ್ಕೆ ಆಗ್ರಹ
ಶಿವಮೊಗ್ಗ ನಗರದಂಚಿನ ಬಡಾವಣೆಗಳನ್ನು ಸೇರ್ಪಡೆ ಮಾಡಿಕೊಂಡು, ಮಹಾನಗರ ಪಾಲಿಕೆ ವಾರ್ಡ್ ಗಳ ವೈಜ್ಞಾನಿಕ ಪರಿಷ್ಕರಣೆ ಮಾಡಬೇಕೆಂಬ ಆಗ್ರಹ ಕಳೆದ ಹಲವು ವರ್ಷಗಳಿಂದಿದೆ. ಈ ಹಿಂದಿನ ನಗರಸಭೆ ಆಡಳಿತಾವಧಿಯಲ್ಲಿದ್ದ 35 ವಾರ್ಡ್ ಗಳೇ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರವೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಇದರಿಂದ ನಾಗರೀಕರಿಗೆ ತೊಂದರೆಯಾಗುತ್ತಿದೆ. ಪ್ರಸ್ತುತ ಜನಸಂಖ್ಯೆ, ವ್ಯಾಪ್ತಿಗೆ ಅನುಗುಣವಾಗಿ ಕನಿಷ್ಠ 50 ರಿಂದ 60 ವಾರ್ಡ್ ಗಳ ರಚನೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬರಲಾರಂಭಿಸಿದೆ.
ಗ್ರಾಪಂ ಅಧೀನದ ಬಡಾವಣೆಗಳ ಗೋಳು ಕೇಳೊರಿಲ್ಲ..!
*** ಶಿವಮೊಗ್ಗ ನಗರದಂಚಿನಲ್ಲಿರುವ ಅಬ್ಬಲಗೆರೆ, ಕೋಟೆಗಂಗೂರು, ನಿಧಿಗೆ, ಮುದ್ದಿನಕೊಪ್ಪ ಸೇರಿದಂತೆ ಕೆಲ ಗ್ರಾಮ ಪಂಚಾಯ್ತಿ ಅಧೀನಗಳಲ್ಲಿ ಕಳೆದ 15 ವರ್ಷಗಳ ಅವಧಿಯಲ್ಲಿ ಭಾರೀ ದೊಡ್ಡ ಸಂಖ್ಯೆಯ ಬಡಾವಣೆಗಳು ಅಭಿವೃದ್ದಿಯಾಗಿವೆ. ಸಾವಿರಾರು ಜನರು ವಾಸಿಸುತ್ತಿದ್ದಾರೆ. ಹಲವು ಗ್ರಾಪಂಗಳ ಅಧೀನದಲ್ಲಿ ದೊಡ್ಡದೊಡ್ಡ ಬಡಾವಣೆಗಳು ನಿರ್ಮಾಣವಾಗಿವೆ. ಆದರೆ ಬಡಾವಣೆಗಳ ನಿರ್ವಹಣೆಗೆ ಅಗತ್ಯವಾದ ಸೌಲಭ್ಯ ಗ್ರಾಪಂ ಆಡಳಿತಗಳಲ್ಲಿ ಇಲ್ಲವಾಗಿದೆ. ಒಳಚರಂಡಿ (ಯುಜಿಡಿ) ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ, ಚರಂಡಿ, ರಸ್ತೆಗಳ ನಿರ್ಮಾಣ, ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಆಗುತ್ತಿಲ್ಲ. ಸ್ಥಳೀಯ ನಾಗರೀಕರಂತೂ ತೀವ್ರ ತೊಂದರೆ ಎದುರಿಸುವಂತಾಗಿದೆ. ಗ್ರಾಪಂ ಆಡಳಿತಗಳಿಗೂ ಇಂತಹ ಬಡಾವಣೆಗಳು ಹೊರೆಯಾಗಿ ಪರಿಣಮಿಸುತ್ತಿವೆ. ಆಡಳಿತದ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ.
ನಗರಾಭಿವೃದ್ದಿ ಸಚಿವರು ಗಮನಿಸಲಿ?
*** ಕಳೆದ ಕೆಲ ತಿಂಗಳುಗಳ ಹಿಂದೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಮಾಡುವ ಕುರಿತಂತೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಹಾಲಿ ಸರ್ಕಾರದ ಅವಧಿಯಲ್ಲಾದರೂ ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಣೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಗರಾಭಿವೃದ್ದಿ ಸಚಿವರು ಕಾಲಮಿತಿಯೊಳಗೆ ಸೂಕ್ತ ಕ್ರಮಕೈಗೊಳ್ಳಲಿದ್ದಾರೆಯೇ? ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.