
ಡಿಎಆರ್ ಆವರಣದಲ್ಲಿ ಮುಂದುವರಿದ ಅನಿರ್ದಿಷ್ಟಾವದಿ ಉಪವಾಸ ಸತ್ಯಾಗ್ರಹ!
ಶಿವಮೊಗ್ಗ, ಫೆ. 14: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ಅನಿರ್ದಿಷ್ಟಾವದಿ ಸತ್ಯಾಗ್ರಹ, ಇದೀಗ ಪೊಲೀಸ್ ಇಲಾಖೆಯ ಡಿಎಆರ್ ಆವರಣದಲ್ಲಿ ಮುಂದುವರಿದಿದೆ!
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘಟನೆಯು ಡಿಸಿ ಕಚೇರಿ ಆವರಣದಲ್ಲಿ, ಸೋಮವಾರದಿಂದ ಅಹೋರಾತ್ರಿ ಅನಿರ್ದಿಷ್ಟಾವದಿ ಪ್ರತಿಭಟನೆ ಆರಂಭಿಸಿತ್ತು. ಸಂಘಟನೆಯ ಪ್ರಧಾನ ಸಂಚಾಲಕ ಟಿ.ಹೆಚ್.ಹಾಲೇಶಪ್ಪ ನೇತೃತ್ವಹಿಸಿದ್ದರು.
‘ತಡರಾತ್ರಿ ಪೊಲೀಸರು ದಿಢೀರ್ ಆಗಿ ನಮ್ಮೆನ್ನೆಲ್ಲ ವಶಕ್ಕೆ ಪಡೆದಿದ್ದರು. ಡಿಎಆರ್ ಮೈದಾನದಲ್ಲಿ ತಂದು ಬಿಟ್ಟು, ಮನೆಗೆ ಹೋಗುವಂತೆ ಹೇಳಿದ್ದರು. ಪೊಲೀಸರ ಜನ ವಿರೋಧಿ ಕ್ರಮ ಖಂಡಿಸಿ, ಡಿಎಆರ್ ಮೈದಾನದಲ್ಲಿಯೇ ಅನಿರ್ದಿಷ್ಟಾವದಿ ಧರಣಿ ಆರಂಭಿಸಿದ್ದೆವೆ. ಕಾನೂನು ರೀತ್ಯ ನಡೆಯುತ್ತಿದ್ದ ಪ್ರತಿಭಟನೆ ಹತ್ತಿಕ್ಕುವ ಕ್ರಮ ಖಂಡನಾರ್ಹವಾದುದಾಗಿದೆ’ ಎಂದು ಟಿ.ಹೆಚ್.ಹಾಲೇಶಪ್ಪ ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡರಾದ ಜಗ್ಗು, ಶಿವಕುಮಾರ್, ಶೇಷಪ್ಪ, ಪರಮೇಶ್ವರ್, ಮಂಜುನಾಥ್, ಆನಂದಪ್ಪ, ರುದ್ರೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಬೇಡಿಕೆಗಳೇನು?: ಎಸ್.ಸಿ.ಪಿ-ಟಿ.ಎಸ್.ಪಿ. ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ತನಿಖೆ ನಡೆಸಬೇಕು. ಯೋಜನೆಯಡಿ ಸಮರ್ಪಕವಾಗಿ ಅನುದಾನ ಬಳಕೆ ಮಾಡದೆ, ಬೇರೆ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಹಲವೆಡೆ ಎಸ್ಸಿ-ಎಸ್ಟಿ ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡದೆ, ಮೇಲ್ವರ್ಗದವರು ವಾಸಿಸುತ್ತಿರುವ ಸ್ಥಳಗಳಲ್ಲಿ ರಸ್ತೆ ನಿರ್ಮಿಸಲಾಗಿದೆ. ತುಂಗಾ ಮೇಲ್ದಂಡೆ ಯೋಜನೆಯವರು ಕಾಮಗಾರಿ ಅನುಷ್ಠಾನದಲ್ಲಿ ಲೋಪ ಎಸಗಿದ್ದಾರೆ.
ಬಸವನಗಂಗೂರು ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮಕೈಗೊಂಡಿಲ್ಲ. ಶಿವಮೊಗ್ಗ ನಗರದಲ್ಲಿ ಅಂಬೇಡ್ಕರ್ ಭವನ ದುರಸ್ತಿ ಕಾರ್ಯ ವಿಳಂಬವಾಗಿ ನಡೆಸಲಾಗುತ್ತಿದೆ ಎಂಬುವುದು ಸೇರಿದಂತೆ ದಲಿತ ಸಮುದಾಯದ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.