
ಶಿವಮೊಗ್ಗ : ರೌಡಿ ಶೀಟರ್ ಕಾಲಿಗೆ ಗುಂಡೇಟು!
ಶಿವಮೊಗ್ಗ, ಡಿ. 28: ಮಹಜರ್ ನಡೆಸಲು ಕರೆದೊಯ್ದ ವೇಳೆ ಪೊಲೀಸರ ಮೇಲೆಯೇ ಡ್ರ್ಯಾಗರ್ ನಿಂದ ದಾಳಿ ನಡೆಸಿ ಪರಾರಿಯಾಗಲೆತ್ನಿಸಿದ, ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಇಂದು ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಮಂಜ ಆಲಿಯಾಸ್ ಓಲಂಗಾ ಮಂಜ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಆರೋಪಿಯನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆ ಯತ್ನ: ಕಳೆದ ಮೂರು ದಿನಗಳ ಹಿಂದೆ ಶಿವಮೊಗ್ಗದ ಫ್ರೀಡಂ ಪಾರ್ಕ್ ಬಳಿ ಯುವಕನೋರ್ವನ ಮೇಲೆ ಆರೋಪಿ ಓಲಂಗಾ ಮಂಜ ಹಾಗೂ ಇತರರು ಮಾರಕಾಸ್ತ್ರಗಳಿಂದ ಹೊಡೆದು ಗಾಯಗೊಳಿಸಿ ತಲೆಮರೆಸಿಕೊಂಡಿದ್ದರು.
ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬುಧವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಗುರುವಾರ ಬೆಳಿಗ್ಗೆ ಸ್ಥಳ ಮಹಜರು ನಡೆಸಲು ಹಾಗೂ ದಾಳಿಗೆ ಬಳಸಿದ ಮಾರಕಾಸ್ತ್ರ ವಶಕ್ಕೆ ಪಡೆಯಲು ಆರೋಪಿಯನ್ನು ಪೊಲೀಸರು ಕರೆದೊಯ್ದ ವೇಳೆ, ಡ್ರ್ಯಾಗರ್ ನಿಂದ ಪೊಲೀಸ್ ಪೇದೆ ರವಿ ಎಂಬುವರ ಮೇಲೆ ದಾಳಿ ನಡೆಸಿದ್ದ.
ಸ್ಥಳದಲ್ಲಿದ್ದ ಇನ್ಸ್’ಪೆಕ್ಟರ್ ಸಿದ್ದೇಗೌಡ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿಯು ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಈ ಹಿಂದೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.