
ಎಸ್ಪಿ ವಾರ್ನಿಂಗ್ : ಎಚ್ಚೆತ್ತ ಶಿವಮೊಗ್ಗ ಪೊಲೀಸರು..!
ಶಿವಮೊಗ್ಗ, ಡಿ. 28: ಶಿವಮೊಗ್ಗ ನಗರದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳದಿದ್ದರೆ, ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದ ಬೆನ್ನಲ್ಲೇ, ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕ್ರೈಂ ಚಟುವಟಿಕೆಗಳಿಗೆ ಮಟ್ಟ ಹಾಕುವ ಕಾರ್ಯ ಬಿರುಸುಗೊಂಡಿದೆ!
ಎಸ್ಪಿ ಎಚ್ಚರಿಕೆ ನಂತರ ಕೆಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಮೈಚಳಿ ಬಿಟ್ಟವರ ರೀತಿಯಲ್ಲಿ ಕಾರ್ಯನಿರ್ವಹಿಸಲಾರಂಭಿಸಿದ್ಧಾರೆ. ಇಷ್ಟು ದಿನ ರಾಜಾರೋಷವಾಗಿ ನಾನಾ ದಂಧೆ ನಡೆಸುತ್ತಿದ್ದವರು, ತಮ್ಮ ವ್ಯವಹಾರಗಳನ್ನು ದಿಢೀರ್ ಆಗಿ ಬಂದ್ ಮಾಡಲಾರಂಭಿಸಿದ್ದಾರೆ. ಕ್ರಿಮಿನಲ್ಸ್ ಗಳಿಗೆ ತಕ್ಕ ಶಾಸ್ತಿಯಾಗಲಾರಂಭಿಸಿದೆ.
ಗಾಂಜಾ ರೈಡ್ : ಇತ್ತೀಚೆಗೆ ಎಸ್ಪಿ ನಡೆಸಿದ ಸಭೆಯ ವೇಳೆ, ಗಾಂಜಾ ದಂಧೆಗೆ ಕಡಿವಾಣ ಹಾಕಲು 10 ದಿನಗಳ ಡೆಡ್’ಲೈನ್ ನೀಡಿದ್ದರು. ಇದೀಗ ಗಾಂಜಾ ರೈಡ್ ಗಳು ಹೆಚ್ಚಾಗಲಾರಂಭಿಸಿದೆ. ಮಾರಾಟಗಾರರು, ಸೇವನೆ ಮಾಡುವವರ ಪತ್ತೆ ಕಾರ್ಯ ಚುರುಕುಗೊಂಡಿದೆ.
ಗುರುವಾರ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಕ್ತಿಧಾಮ ಲೇಔಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ತಾಲೂಕು ಚೋರಡಿಯ ಮರಾಠಿ ಕ್ಯಾಂಪ್ ನಿವಾಸಿ ನಾಗರಾಜ್ (38) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. 28 ಸಾವಿರ ರೂ. ಮೌಲ್ಯದ 680 ಗ್ರಾಂ ತೂಕದ ಒಣ ಗಾಂಜಾ, 1050 ರೂಪಾಯಿ ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.