
ಶಿವಮೊಗ್ಗ : ನೆನೆಗುದಿಗೆ ಬಿದ್ದ 2 ನೇ ಹಂತದ ಹೊರವರ್ತುಲ ರಸ್ತೆ ಯೋಜನೆ!
ಗಮನಹರಿಸುವರೆ ಕೇಂದ್ರ ಭೂ ಸಾರಿಗೆ ಸಚಿವ ಗಡ್ಕರಿ, ಸಂಸದ ಬಿ.ವೈ.ರಾಘವೇಂದ್ರ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಡಿ. 29: ಶಿವಮೊಗ್ಗ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ಹೊರವರ್ತುಲ ರಸ್ತೆಯ ಪ್ರಥಮ ಹಂತ (ದಕ್ಷಿಣ ಭಾಗ) ದ ಕಾಮಗಾರಿ ಪ್ರಗತಿಯಲ್ಲಿದೆ. ಈ ನಡುವೆ ಎರಡನೇ ಹಂತ (ಉತ್ತರ ಭಾಗ) ದ ಯೋಜನೆ ನೆನೆಗುದಿಗೆ ಬಿದ್ದಿದೆ!
ಹಾಲಿ ಕೇಂದ್ರ ಸರ್ಕಾರದ ಅಧಿಕಾರವಧಿ ಪೂರ್ಣಕ್ಕೆ ಇನ್ನೂ ಕೇವಲ ಮೂರ್ನಾಲ್ಕು ತಿಂಗಳು ಮಾತ್ರವಿದೆ. ಅಷ್ಟರೊಳಗೆ ಎರಡನೇ ಹಂತದ ಯೋಜನೆಗೆ, ಕೇಂದ್ರದ ಭೂ ಸಾರಿಗೆ ಸಚಿವಾಲಯದ ಅನುಮತಿ ದೊರಕಲಿದೆಯೇ? ಎಂಬುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಒಂದೂವರೆ ದಶಕ : ಭವಿಷ್ಯದ ಶಿವಮೊಗ್ಗ ನಗರದ ಬೆಳವಣಿಗೆ, ವಾಹನ ದಟ್ಟಣೆ ಗಮನದಲ್ಲಿಟ್ಟುಕೊಂಡು 2009 ರಲ್ಲಿಯೇ 33 ಕಿ.ಮೀ. ಉದ್ದದ, 200 ಅಡಿ ಅಗಲದ ವರ್ತುಲ ರಸ್ತೆ ನಿರ್ಮಾಣ ಯೋಜನೆ ಸಿದ್ದಪಡಿಸಲಾಗಿತ್ತು.
ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಅನುದಾನ ಮೀಸಲಿರಿಸಿದ್ದರು. ಆದರೆ ಅವರು ಸಿಎಂ ಸ್ಥಾನದಿಂದ ನಿರ್ಗಮಿಸಿದ ನಂತರ, ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ನಂತರ ಬಂದ ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಂಡಿರಲಿಲ್ಲ.
ಮತ್ತೆ ಚಾಲನೆ : ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವರ್ತುಲ ರಸ್ತೆ ಯೋಜನೆ ಅನುಷ್ಠಾನಕ್ಕೆ ಕ್ರಮಕೈಗೊಂಡಿದ್ದರು. ಶಿವಮೊಗ್ಗ ನಗರದ ಮೂಲಕ ಹಾದು ಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳಿಗೆ ಬೈಪಾಸ್ ರಸ್ತೆಯ ರೀತಿಯಲ್ಲಿ ವರ್ತುಲ ರಸ್ತೆ ಅಭಿವೃದ್ದಿಪಡಿಸುವ ಯೋಜನೆ ರೂಪಿಸಿದ್ದರು.
2018 ರಲ್ಲಿ ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿಯಾದ ವೇಳೆ, ರಾಜ್ಯದ ಪಾಲುದಾರಿಕೆಯ ನೆರವು ದೊರಕಿತ್ತು. ಕೇಂದ್ರ ಭೂ ಸಾರಿಗೆ ಸಚಿವಾಲಯ ಕೂಡ ವರ್ತುಲ ರಸ್ತೆಯ ಒಂದನೇ ಹಂತಕ್ಕೆ ಹಸಿರು ನಿಶಾನೆ ತೋರ್ಪಡಿಸಿತ್ತು. ಸದ್ಯ 12 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಆದರೆ ಎರಡನೇ ಹಂತದ ರಸ್ತೆ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಅನುಮತಿ ದೊರಕಿರಲಿಲ್ಲ. ಕಳೆದ ಜೂ. 13 ರಂದು ಬಿ.ವೈ.ರಾಘವೇಂದ್ರ ಅವರು, ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು.
2 ನೇ ಹಂತದ ಯೋಜನೆಗೆ ಮಂಜೂರಾತಿ ಪ್ರಕ್ರಿಯೆಗಳು ಚಾಲನೆಗೊಂಡಿವೆ. ಶೀಘ್ರದಲ್ಲಿಯೇ ಯೋಜನೆಗೆ ಮಂಜೂರಾತಿ ಪಡೆದು ಕಾಮಗಾರಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಸಂಸದರು ಮಾಹಿತಿ ನೀಡಿದ್ದರು.
ಆದರೆ ಹಾಲಿ ಕೇಂದ್ರ ಸರ್ಕಾರದ ಅವಧಿ ಪೂರ್ಣ ಹಂತಕ್ಕೆ ಬರಲಾರಂಭಿಸಿದ್ದು, ಇಲ್ಲಿಯವರೆಗೂ ಭೂ ಸಾರಿಗೆ ಸಚಿವಾಲಯದ ಅನುಮತಿ ದೊರಕಿಲ್ಲ. ಈ ನಿಟ್ಟಿನಲ್ಲಿ ಸಂಸದರು ಆದ್ಯ ಗಮನಹರಿಸಿ, ಹಾಲಿ ಸರ್ಕಾರದ ಅವಧಿಯಲ್ಲಿಯೇ ಯೋಜನೆ ಅನುಷ್ಠಾನಕ್ಕೆ ಚಿತ್ತ ಹರಿಸಲಿದ್ದಾರೆಯೇ ಕಾದು ನೋಡಬೇಕಾಗಿದೆ.
ಮೊದಲ ಹಂತದಲ್ಲಿ 14.74, ಎರಡನೇ ಹಂತದಲ್ಲಿ 15 ಕಿ.ಮೀ. ರಸ್ತೆ ನಿರ್ಮಾಣ
*** ಮೊದಲ ಹಂತದಲ್ಲಿ ಒಟ್ಟಾರೆ 14.74 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ. ಎನ್.ಹೆಚ್.ಎ.ಐ ವತಿಯಿಂದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದೆ. ಎರಡನೇ ಹಂತದಲ್ಲಿ 15 ಅಥವಾ 18 ಕಿ.ಮೀ. ಉದ್ದದ ರಸ್ತೆ ನಿರ್ಮಾಣದ ಯೋಜನೆ ಸಿದ್ದಪಡಿಸಲಾಗಿದೆ. ಈ ಸಂಬಂಧ ಎರಡು ಪ್ರಸ್ತಾವನೆಗಳನ್ನು ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಸಲ್ಲಿಕೆಯಾಗಿದೆ. ಎರಡರಲ್ಲಿ ಒಂದು ಪ್ರಸ್ತಾವನೆಗೆ ಸಚಿವಾಲಯ ಅನುಮತಿ ನೀಡಬೇಕಾಗಿದೆ. ಆದರೆ ಕೆಲ ತಾಂತ್ರಿಕ ಕಾರಣ ಮುಂದಿಟ್ಟುಕೊಂಡು ಯೋಜನೆಗೆ ಅನುಮತಿ ದೊರಕಿಲ್ಲವಾಗಿದೆ.