
ಶಿವಮೊಗ್ಗ – ಭದ್ರಾವತಿಯಲ್ಲಿ ಗಾಂಜಾ ಅಡ್ಡೆಗಳ ಮೇಲೆ ಪೊಲೀಸರ ರೈಡ್!
ಶಿವಮೊಗ್ಗ, ಡಿ. 29: ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಗಾಂಜಾ ಮಾರಾಟ ಹಾಗೂ ಗಾಂಜಾ ಗಿಡ ಬೆಳೆದಿದ್ದ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ : ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಳಲಿಕೊಪ್ಪ ಗ್ರಾಮದಲ್ಲಿ, ಮನೆಯೊಂದರ ಹಿಂಭಾಗ ಗಾಂಜಾ ಗಿಡ ಬೆಳೆಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಜರತ್ ಯಾನೆ ನಸ್ರು ಎಂಬ ಆರೋಪಿಯು ತನ್ನ ಮನೆ ಹಿಂಭಾಗ ಗುಪ್ತವಾಗಿ ಗಾಂಜಾ ಗಿಡ ಬೆಳೆಸಿದ್ದ.
ಒಟ್ಟಾರೆ 12 ಕೆಜಿ 350 ಗ್ರಾಂ ತೂಕದ ಹಸಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ಬಾಲರಾಜ್, ಇನ್ಸ್’ಪೆಕ್ಟರ್ ಮಂಜುನಾಥ್, ಸಬ್ ಇನ್ಸ್’ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಭದ್ರಾವತಿ : ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ಕಣಕಟ್ಟೆ ಗೋಂಧಿ ಚಾನೆಲ್ ಬಳಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಭದ್ರಾವತಿ ಸೀಗೆಬಾಗಿ ನಿವಾಸಿ ಸಮೀವುಲ್ಲಾ (37) ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿಯ ದಾದಾಪೀರ್ (28) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
54 ಸಾವಿರ ರೂ. ಮೌಲ್ಯದ 1 ಕೆ.ಜಿ. 618 ಗ್ರಾಂ ತೂಕದ ಒಣ ಗಾಂಜಾ, 1500 ನಗದು, ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಡಿವೈಎಸ್ಪಿ ನಾಗರಾಜ್, ಇನ್ಸ್’ಪೆಕ್ಟರ್ ಶ‍್ರೀಶೈಲಕುಮಾರ್, ಸಬ್ ಇನ್ಸ್’ಪೆಕ್ಟರ್ ಶ‍್ರೀಕೃಷ್ಣ ಕುಮಾರ್ ಮಾನೆ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.