
ಶಿವಮೊಗ್ಗದ ಆಲ್ಕೋಳದ ಎಫ್.ಸಿ.ಐ ಗೋದಾಮಿನಿಂದ ಬರುವ ಹುಳು, ಹುಪ್ಪಟ್ಟೆ : ನಾಗರೀಕರು ತತ್ತರ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಡಿ. 30: ಶಿವಮೊಗ್ಗ ( shimoga ) ನಗರದ ಹೊರವಲಯ ಆಲ್ಕೋಳ ಬಡಾವಣೆಯಲ್ಲಿರುವ ಭಾರತೀಯ ಆಹಾರ ನಿಗಮ ( FCI ) ಗೋದಾಮಿನಿಂದ ಆಗಮಿಸುವ ಹುಳ್ಳು-ಹುಪ್ಪಟ್ಟೆಗಳು ಸುತ್ತಮುತ್ತಲಿನ ನಿವಾಸಿಗಳ ನಿದ್ದೆಗೆಡುವಂತೆ ಮಾಡಿವೆ…!
‘ಸಂಜೆಯಾಗುತ್ತಿದ್ದಂತೆ ಗೋದಾಮು ಸಮೀಪದ ಮನೆಗಳಿಗೆ ಭಾರೀ ಪ್ರಮಾಣದ ಹುಳು-ಹುಪ್ಪಟ್ಟೆಗಳ ಆಗಮನವಾಗುತ್ತದೆ. ಮನೆಗಳ ಕಿಟಕಿ, ಬಾಗಿಲು ತೆರೆಯಲು ಆಗದಂತಾಗಿದೆ. ಸೊಳ್ಳೆ ಪರದೆ ಮರೆಯಲ್ಲಿ ಊಟ – ತಿಂಡಿ ಮಾಡುವಂತಾಗಿದೆ. ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ’ ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.
‘ನುಸಿ ಹುಳುಗಳು ಮನೆಯೊಳಗೆ ಹಾರಿಕೊಂಡು ಬರುತ್ತವೆ. ಅಡುಗೆ ಪಾತ್ರೆಗಳು, ಕುಡಿಯುವ ನೀರು ಸೇರಿದಂತೆ ಎಲ್ಲೆಂದರಲ್ಲಿ ಬೀಳುತ್ತಿವೆ. ನೆಮ್ಮದಿಯಾಗಿ ಮಲಗಲು ಸಾಧ್ಯವಾಗದಂತಾಗಿದೆ. ಮೈಮೇಲೆ ಹರಿದಾಡುತ್ತವೆ. ಹುಳುಗಳ ಕಾಟಕ್ಕೆ ಸಣ್ಣ ಮಕ್ಕಳು ಸರಿಯಾಗಿ ಮಲಗಲು ಆಗುತ್ತಿಲ್ಲ’ ಎಂದು ಎಫ್.ಸಿ.ಐ ಗೋದಾಮು ಹಿಂಭಾಗದ ಆಲ್ಕೋಳ (alkola) ದ ನಂದಿನಿ ಬಡಾವಣೆ ನಿವಾಸಿ ರಾಜೇಂದ್ರಪ್ಪ ಅವರು ದೂರಿದ್ದಾರೆ.
‘ಗೋದಾಮಿನಿಂದ ನುಸಿ ಹುಳು – ಹುಪ್ಪಟ್ಟೆಗಳು ಹೊರ ಬರದಂತೆ ಸೂಕ್ತ ವ್ಯವಸ್ಥೆಯನ್ನು ಗೋದಾಮಿನವರು ಮಾಡಬೇಕು. ನಮಗಾಗುತ್ತಿರುವ ತೊಂದರೆ ತಪ್ಪಿಸಬೇಕು. ಕಳೆದ ಹಲವು ವರ್ಷಗಳಿಂದ ಇದೇ ದುಃಸ್ಥಿತಿಯಿದೆ’ ಎಂದು ರಾಜೇಂದ್ರಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನುಸಿ ಹುಳುಗಳ ಕಾಟಕ್ಕೆ ರಾತ್ರಿಯೆಲ್ಲ ನಿದ್ರೆಯಿಲ್ಲದಂತಾಗಿದೆ. ಸಂಜೆ ಮನೆಯೊಳಗೆ ಲೈಟ್ ಗಳು ಆನ್ ಮಾಡುತ್ತಿದ್ದಂತೆ, ನುಸಿಗಳು ಮನೆಯೊಳಗೆ ಹಾರಿ ಬರುತ್ತವೆ. ಊಟದ ತಟ್ಟೆಯೊಳಗೆ ಬೀಳುತ್ತವೆ. ಮನೆಯ ಎಲ್ಲೆಂದರಲ್ಲಿ ಕಂಡುಬರುತ್ತವೆ. ಹುಳು ಹುಪ್ಪಟ್ಟೆಗಳ ಕಾಟಕ್ಕೆ ಸಾಕಾಗಿ ಹೋಗಿದೆ.
ಎಫ್.ಸಿ.ಐ ನವರ ಗಮನಕ್ಕೆ ತಂದರೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸ್ಟಾಕ್ ಇದ್ದಾಗ ಹುಳುಗಳು ಬರುತ್ತವೆ. ನಾವೇನೂ ಮಾಡಕ್ಕಾಗುವುದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಹುಳುಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯನ್ನು ಗೋದಾಮಿ ( warehouse ) ನವರು ಏಕೆ ಮಾಡುತ್ತಿಲ್ಲ’ ಎಂದು ಸ್ಥಳೀಯ ಬಡಾವಣೆ ನಿವಾಸಿ, ಯುವ ಮುಖಂಡ ರಮೇಶ್ ಎಂಬುವರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರತಿಭಟನೆ ಅನಿವಾರ್ಯ : ಹುಳುಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಎಫ್.ಸಿ.ಐ ಗೋದಾಮು ಆಡಳಿತಕ್ಕೆ ಸೂಚನೆ ನೀಡಬೇಕು. ನಾಗರೀಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.