
ಪುಲ್ವಾಮಾ ದಾಳಿ : ಹುತಾತ್ಮ ಯೋಧರಿಗೆ ಯುವ ಕಾಂಗ್ರೆಸ್ ಗೌರವಾರ್ಪಣೆ
ಶಿವಮೊಗ್ಗ, ಫೆ. 14: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥ ಮಂಗಳವಾರ ಶಿವಮೊಗ್ಗ ನಗರದ ಸೈನಿಕ ಪಾರ್ಕ್ ನಲ್ಲಿ ಯುವ ಕಾಂಗ್ರೆಸ್ ಘಟಕವು ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪುಷ್ಪಾರ್ಚಣೆ ಸಲ್ಲಿಸಿ ನಮಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್ ಮಾತನಾಡಿ, ಯುದ್ದವಿಲ್ಲದೆ 40 ಕ್ಕೂ ಹೆಚ್ಚು ಸೈನಿಕರು ಬಾಂಬ್ ದಾಳಿಗೆ ಒಳಗಾಗಿ ಹುತಾತ್ಮರಾಗಿ ಮೂರು ವರ್ಷ ಕಳೆದರೂ ಇಂದಿಗೂ ಪುಲ್ವಾಮಾ ದಾಳಿಯ ಕುರಿತು ನಿಖರವಾದ ಸತ್ಯ ಹೊರ ಬಂದಿಲ್ಲ. ಮಡಿದ ಸೈನಿಕರ ಕುಟುಂಬಗಳಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಆ ಕುಟುಂಬಗಳು ಈಗಲೂ ಕಣ್ಣೀರಿನಲ್ಲಿ ಬದುಕು ಸಾಗಿಸುತ್ತಿವೆ. ಆದರೆ ಇದನ್ನೆ ಬಳಸಿಕೊಂಡು ಚುನಾವಣೆ ಗೆದ್ದವರು ಇಂದು ದೇಶವನ್ನು ಮೊತ್ತೊಂದಿಷ್ಟು ದಿವಾಳಿ ಮಾಡಲು ಹೊರಟಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ರವರು ಮಾತನಾಡಿ, ಅತ್ಯಂತ ಸೂಕ್ಷ್ಮವಾದ ಮತ್ತು ಸಾಕಷ್ಟು ಭದ್ರತೆ ಇರುವ ಪ್ರದೇಶದಲ್ಲಿ 350 ಕೆಜಿ ಆರ್.ಡಿ.ಎಕ್ಸ್ ಬಾಂಬ್ ಹೊತ್ತ ಕಾರು ಹೇಗೆ ಬಂತು ಎನ್ನುವ ಅನುಮಾನಕ್ಕೆ ಇಂದಿಗೂ ಸ್ಪಷ್ಟತೆ ಸಿಕ್ಕಿಲ್ಲ. ಬರೀ ಸಂತಾಪ ಸೂಚಿಸಿದರೆ ಸಾಲದು, ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಯುವಕರು ಹೋರಾಟಕ್ಕಿಳಿದು ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರವನ್ನು ನ್ಯಾಯ ಕೇಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್. ಕುಮಾರೇಶ್, ರಾಜ್ಯ ಕಾರ್ಯದರ್ಶಿ ಆರ್ ಕಿರಣ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ ರಾಹುಲ್, ರಾಕೇಶ್, ಇರ್ಫಾನ್,ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ಕೆ.ಎಲ್.ಪವನ್, ಪ್ರಮುಖರಾದ ತಂಗರಾಜ್, ಮಸ್ತಾನ್, ಮೋಹನ್ ಸೋಮಿನಕೊಪ್ಪ ,ಎನೋಶ್, ಅಹಮದ್ ಸೋಮಿನಕೊಪ್ಪ, ವಿನಯ್ ಮೆಂಡಿಸ್, ಇನ್ಶಲ್, ಅನ್ವರ್ ಮೊದಲಾದವರಿದ್ದರು.