
ಅಪಾಯಕಾರಿ ರಸ್ತೆ : ಶಾಲಾ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆ?!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜ. 2: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪ ಬಡಾವಣೆಯ ಸರ್ಕಾರಿ ಶಾಲೆ ಸಮೀಪದ ರಾಷ್ಟ್ರೀಯ ಹೆದ್ದಾರಿ, ಶಾಲಾ ಮಕ್ಕಳ ಪಾಲಿಗೆ ಗಂಡಾಂತರಕಾರಿಯಾಗಿ ಪರಿಣಮಿಸಿದೆ. ಸಂಬಂಧಿಸಿದ ಇಲಾಖೆಗಳ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯಿಂದ ಶಾಲಾ ಮಕ್ಕಳು ಜೀವ ಕೈಯಲ್ಲಿಡಿದು ಓಡಾಡುವಂತಹ ದುಃಸ್ಥಿತಿ ನಿರ್ಮಾಣವಾಗಿದೆ!
ಸದರಿ ಸ್ಥಳದ ಬಳಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿವೆ. ಶಾಲಾ ಮಕ್ಕಳು ಸೇರಿದಂತೆ ನಾಗರೀಕರು ಗಾಯಗೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ ಕೂಡ ಅದೇ ಸ್ಥಳದ ಬಳಿಯೇ ಮತ್ತೊಂದು ಅವಘಡ ಸಂಭವಿಸಿದೆ.
ವೇಗವಾಗಿ ಆಗಮಿಸಿದ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ, ಶಾಲೆಗೆ ತೆರಳುತ್ತಿದ್ದ ಬಾಲಕಿ ಹಾಗೂ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಸರ್ಕಾರಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ಸುಶ್ಮೀತಾ (12) ಹಾಗೂ ಅದೇ ಬಡಾವಣೆ ನಿವಾಸಿ ಶಿವರಾಜ್ (53) ಎಂಬುವರೇ ಗಾಯಗೊಂಡವರೆಂದು ಗುರುತಿಸಲಾಗಿದೆ. ಹಾಗೆಯೇ ಬೈಕ್ ಸವಾರನಿಗೂ ಪೆಟ್ಟು ಬಿದ್ದಿದೆ. ತಕ್ಷಣವೇ ಸ್ಥಳೀಯ ನಿವಾಸಿಗಳು ಮೂವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಮನಹರಿಸಿಲ್ಲ: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಶಾಲೆಗೆ ಹೊಂದಿಕೊಂಡಂತಿರುವ ಹೆದ್ದಾರಿಯು ವಿದ್ಯಾರ್ಥಿಗಳ ಪಾಲಿಗೆ ಅಕ್ಷರಶಃ ಯಮಸ್ವರೂಪಿಯಾಗಿದೆ.
ಸದರಿ ಪ್ರದೇಶ ನಗರ ವ್ಯಾಪ್ತಿಯಲ್ಲಿದ್ದರೂ ಮಿತಿಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಇದರಿಂದ ಶಾಲಾ ಮಕ್ಕಳು ರಸ್ತೆ ದಾಟಿ ಹೋಗುವುದು ದುಸ್ತರವಾಗಿ ಪರಿಣಮಿಸಿದೆ. ಈ ಹಿಂದೆ ಸಂಭವಿಸಿದ ಅಪಘಾತದ ವೇಳೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸೂಕ್ತ ಸುರಕ್ಷತಾ ಕ್ರಮಕೈಗೊಳ್ಳುವಂತೆ ಈ ಹಿಂದೆ, ರಾಷ್ಟ್ರೀಯ ಹೆದ್ಧಾರಿ ಇಲಾಖೆ ಎಂಜಿನಿಯರ್ ಗಳಿಗೆ ಮನವಿ ಮಾಡಲಾಗಿತ್ತು. ಶಾಲಾ ಮಕ್ಕಳ ಸುರಕ್ಷಿತಾ ಸಂಚಾರಕ್ಕೆ ಸ್ಕೈ ವಾಕರ್ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದ್ದರು. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಮತ್ತೊಂದೆಡೆ, ಸಂಚಾರಿ ಠಾಣೆ ಪೊಲೀಸರು ಕೂಡ ವಾಹನಗಳ ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಅಪಘಾತಗಳ ಕಾರಣದಿಂದಲೇ, ಈ ಹಿಂದೆ ರಸ್ತೆಗೆ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಏಕಾಏಕಿ ತೆಗೆಯಲಾಗಿತ್ತು. ಶಾಲಾ ಮಕ್ಕಳ ಸುರಕ್ಷತಾ ಸಂಚಾರಕ್ಕೆ ಯಾವುದೇ ಕ್ರಮಗಳ ಪಾಲನೆಯೂ ಮಾಡಿಲ್ಲ.
ಭವಿಷ್ಯದಲ್ಲಿ ದೊಡ್ಡ ಅನಾಹುತ ಸಂಭವಿಸುವ ಮುನ್ನ ಇನ್ನಾದರೂ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕು. ಸರ್ಕಾರಿ ಶಾಲೆ ಸಮೀಪದ ಹೆದ್ದಾರಿಯಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.
ಇನ್ನಾದರೂ ಎಚ್ಚೆತ್ತುಕೊಳ್ಳುವರೆ ಟ್ರಾಫಿಕ್ ಪೊಲೀಸರು?
*** ಗಾಡಿಕೊಪ್ಪದ ಸರ್ಕಾರ ಶಾಲೆ ವೃತ್ತ ಅಪಾಯಕಾರಿಯಾಗಿದೆ. ಈ ಹಿಂದೆ ನಾಗರೀಕರ ಒತ್ತಾಯದ ಮೇರೆಗೆ ಟ್ರಾಫಿಕ್ ಪೊಲೀಸರು ಸದರಿ ವೃತ್ತದ ಬಳಿ ವಾಹನಗಳ ವೇಗ ನಿಯಂತ್ರಣಕ್ಕೆ ಬ್ಯಾರಿಕೇಡ್, ಡ್ರಮ್ ಗಳನ್ನಿಟ್ಟಿದ್ದರು. ಆದರೆ ಕೆಲ ದಿನಗಳಲ್ಲಿಯೇ ಇವುಗಳು ಕಣ್ಮರೆಯಾಗಿದ್ದವು. ಸದರಿ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಮಾಡಬೇಕು. ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಹಾಕಬೇಕು. ಟ್ರಾಫಿಕ್ ಪೊಲೀಸರನ್ನು ಕರ್ತವ್ಯತಕ್ಕೆ ನಿಯೋಜನೆ ಮಾಡಬೇಕು. ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ನಾಗರೀಕರು ಆಗ್ರಹಿಸುತ್ತಾರೆ.