
ಶಿವಮೊಗ್ಗ ನಗರಕ್ಕೆ ತುಂಗಾ ಡ್ಯಾಂನಿಂದ ಹೆಚ್ಚುವರಿ ನೀರು ಪೂರೈಕೆಯತ್ತ ಚಿತ್ತ ಹರಿಸುವರೆ ಆಡಳಿತಗಾರರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜ. 3: ದೇಶ – ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಎರಡನೇ ಹಂತದ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ವರ್ಷದಿಂದ ವರ್ಷಕ್ಕೆ ನಗರದ (shimoga) ಬೆಳವಣಿಗೆ ಹಾಗೂ ಜನಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ.
ಆದರೆ ನಗರದ ಬೆಳವಣಿಗೆಗೆ ಅನುಗುಣವಾಗಿ, ಮೂಲಸೌಕರ್ಯಗಳು ಬೆಳವಣಿಗೆಯಾಗುತ್ತಿಲ್ಲ. ದೂರದೃಷ್ಟಿಯ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ. ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಇದಕ್ಕೆ ಕುಡಿಯುವ ನೀರು (drinking water) ಪೂರೈಕೆಯಲ್ಲಾಗುತ್ತಿರುವ ವ್ಯತ್ಯಯ ತಾಜಾ ನಿದರ್ಶನವಾಗಿದೆ!
ಹೌದು. ವರ್ಷದಿಂದ ವರ್ಷಕ್ಕೆ ನಗರದ ಕುಡಿಯುವ ನೀರಿನ ಬೇಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗೆ ಅನುಗುಣವಾಗಿ ನಾಗರೀಕರಿಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ನಗರಕ್ಕೆ ನೀರು ಪೂರೈಕೆಯ ಮೂಲ ಕೇಂದ್ರವಾದ ಗಾಜನೂರಿನ ತುಂಗಾ ಜಲಾಶಯದಿಂದ, ಹೆಚ್ಚುವರಿ ನೀರು ಪೂರೈಕೆ ಮಾಡುವ ಯೋಜನೆಗಳು ಅನುಷ್ಠಾನಗೊಂಡಿಲ್ಲ.
ಇದು ನೀರಿನ ಪೂರೈಕೆಯಲ್ಲಿನ ವ್ಯತ್ಯಯಕ್ಕೆ ಮುಖ್ಯ ಕಾರಣವಾಗಿದೆ. ಸದ್ಯ ನಗರದ ಹೊರವಲಯದಲ್ಲಿ ದೊಡ್ಡ ದೊಡ್ಡ ಬಡಾವಣೆಗಳು ಅಭಿವೃದ್ದಿಯಾಗಿವೆ. ಸದರಿ ಏರಿಯಾಗಳಿಗೆ ತುಂಗಾ ನದಿ ನೀರು ಪೂರೈಕೆ ಮಾಡಬೇಕೆಂಬ ಒತ್ತಾಯ ನಾಗರೀಕ ವಲಯದಿಂದ ಕೇಳಿಬರುತ್ತಿದೆ.
ಇದಕ್ಕೆ ತುಂಗಾ ಜಲಾಶಯ (tunga dam) ದಿಂದ ಹೆಚ್ಚುವರಿ ನೀರು ಪೂರೈಕೆಯಾಗಬೇಕು. ಹೊಸದೊಂದು ನೀರು ಶುದ್ದೀಕರಣ ಘಟಕ ಸ್ಥಾಪನೆಯಾಗಬೇಕು. ನೀರು ಲಿಫ್ಟ್ ಮಾಡುವ ಮೋಟಾರ್ ಗಳ ಅಳವಡಿಕೆಯಾಗಬೇಕು. ಆದರೆ ಈ ನಿಟ್ಟಿನಲ್ಲಿ ಆಡಳಿತಗಾರರು ಯಾವುದೇ ಚಿತ್ತ ಹರಿಸಿಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಸಖೇದಾಶ್ಚರ್ಯ ಸಂಗತಿಯಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ದೂರುತ್ತಾರೆ
24*7 ಅವ್ಯವಸ್ಥೆ : ನಗರದ ನಾಗರೀಕರಿಗೆ ದಿನದ 24 ಗಂಟೆ ನೀರು ಪೂರೈಸುವ ಉದ್ದೇಶ ಹೊಂದಿರುವ 24*7 ಯೋಜನೆ ನಗರದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಈಗಾಗಲೇ ಹಲವು ಬಡಾವಣೆಗಳಿಗೆ ಸದರಿ ಯೋಜನೆಯಡಿ ಹೊಸ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ.
ಉಳಿದಂತೆ ನಗರದ ಹೊರವಲಯ ಸೇರಿದಂತೆ ವಿವಿಧೆಡೆ ಯೋಜನೆ ಅನುಷ್ಠಾನ ಹಂತದಲ್ಲಿದೆ. ಆದರೆ ದಿನದ 24 ಗಂಟೆಯಿರಲಿ, ಕೆಲ ಗಂಟೆಗಳ ಕಾಲವೂ ನೀರು ಬರುತ್ತಿಲ್ಲವೆಂಬ ಆರೋಪ ಹಲವು ಬಡಾವಣೆಗಳ ನಾಗರೀಕರದ್ದಾಗಿದೆ. ಹಳೇಯ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ನೀರು ಸಾಕಾಗುತ್ತಿಲ್ಲ : ‘ಸದ್ಯ ಶಿವಮೊಗ್ಗಕ್ಕೆ ಪ್ರತಿನಿತ್ಯ 84 ಎಂಎಲ್’ಡಿ ನೀರು ಪೂರೈಕೆಯಾಗುತ್ತಿದೆ. ತುಂಗಾ ಡ್ಯಾಂನಿಂದ ಹೆಚ್ಚುವರಿ ನೀರು ಪೂರೈಕೆಯಾದರೆ ಮಾತ್ರ 24*7 ಯೋಜನೆಯಡಿ ಸಮರ್ಪಕ ನೀರು ಪೂರೈಕೆ ಮಾಡಬಹುದಾಗಿದೆ. ಹೆಚ್ಚುವರಿ ನೀರು ಪೂರೈಕೆಯ ಯಾವುದೇ ಯೋಜನೆಗಳು ಅನುಷ್ಠಾನಗೊಳ್ಳದ ಕಾರಣದಿಂದ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುವಂತಾಗಿದೆ’ ಎಂದು ಜಲ ಮಂಡಳಿ (water board) ಮೂಲಗಳು ಹೇಳುತ್ತವೆ.
ಇನ್ನಾದರೂ ಆಡಳಿತಗಾರರು ಎಚ್ಚೆತ್ತುಕೊಳ್ಳಬೇಕು. ಭವಿಷ್ಯದ ನಗರದ ನೀರು ಪೂರೈಕೆ ಗಮನದಲ್ಲಿಟ್ಟುಕೊಂಡು ಗಾಜನೂರು ತುಂಗಾ ಡ್ಯಾಂನಿಂದ ನಗರಕ್ಕೆ ಹೆಚ್ಚುವರಿ ನೀರು ಪೂರೈಕೆಗೆ ಅಗತ್ಯ ಯೋಜನೆಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳುವರೆ ಕಾದು ನೋಡಬೇಕಾಗಿದೆ.
ಬೋರ್’ವೆಲ್ ಮೊರೆ ಹೋಗುತ್ತಿರುವ ನಾಗರೀಕರು!
*** ನಗರದ ಹೊರವಲಯದ ಹಲವು ಬಡಾವಣೆಗಳ ನಾಗರೀಕರಿಗೆ ಕುಡಿಯಲು ತುಂಗಾ ನದಿ ನೀರು ಲಭ್ಯವಾಗುತ್ತಿಲ್ಲ. ಈ ಕಾರಣದಿಂದ ಹೊಸದಾಗಿ ಮನೆ ನಿರ್ಮಾಣ ಮಾಡುವವರು ಅನಿವಾರ್ಯವಾಗಿ ಬೋರ್’ವೆಲ್ (borewell) ಮೊರೆ ಹೋಗುತ್ತಿದ್ದಾರೆ. ಹಲವು ಬಡಾವಣೆಗಳ ನಾಗರೀಕರು ಕುಡಿಯಲು ಯೋಗ್ಯವಲ್ಲದ ಲವಣಾಂಶಯುಕ್ತ ಬೋರ್’ವೆಲ್ ನೀರನ್ನೇ ಕುಡಿಯುವಂತಾಗಿದೆ. ಈ ಕಾರಣದಿಂದ ಆಡಳಿತಗಾರರು ತುಂಗಾ ಡ್ಯಾಂನಿಂದ ನಗರಕ್ಕೆ ಹೆಚ್ಚುವರಿ ನೀರು ಪೂರೈಕೆಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಗಾಜನೂರಿನ ಡ್ಯಾಂ ಸಮೀಪದಲ್ಲಿಯೇ ಮತ್ತೊಂದು, ನೀರು ಶುದ್ದೀಕರಣ ಘಟಕ ಸ್ಥಾಪಿಸಬೇಕು. ಹಾಲಿ ನಗರದಲ್ಲಿರುವ ನೀರು ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಬೇಕು. ಪ್ರತಿಯೋರ್ವ ನಾಗರೀಕರಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ತನ್ನ ಗುರುತರ ಜವಾಬ್ದಾರಿ ಮನಗಾಣಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಹೇಳುತ್ತಾರೆ.