2 thousand autos pending renovation in Shimoga | Vehicles older than 15 years are not allowed to be renewed | What were the decisions taken in the meeting chaired by DC? | ಶಿವಮೊಗ್ಗದಲ್ಲಿ 2 ಸಾವಿರ ಆಟೋಗಳ ನವೀಕರಣ ಬಾಕಿ | 15 ವರ್ಷ ಮೇಲ್ಪಟ್ಟ ವಾಹನಗಳ ನವೀಕರಣಕ್ಕಿಲ್ಲ ಅವಕಾಶ | ಡಿಸಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು? |

ಶಿವಮೊಗ್ಗದಲ್ಲಿ 2 ಸಾವಿರ ಆಟೋಗಳ ನವೀಕರಣ ಬಾಕಿ..!

ಶಿವಮೊಗ್ಗ, ಜ. 4: ‘ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೋ ರಿಕ್ಷಾಗಳಿಗೆ ಪರವಾನಿಗೆ ನೀಡುವಂತೆ’ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಡಿಸಿ ಡಾ. ಸೆಲ್ವಮಣಿ ಆರ್ ಅವರು ಸೂಚಿಸಿದ್ದಾರೆ.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಟೋ ರಿಕ್ಷಾ ಪರವಾನಗಿ ನೀಡುವ ಕುರಿತು ಏರ್ಪಡಿಸಲಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ನಗರದಲ್ಲಿ ನೋಂದಾಯಿತ 304 ಸಂಖ್ಯೆಯ ಆಟೋ ರಿಕ್ಷಾಗಳಿಗೆ ಪರವಾನಗಿ ಬಾಕಿ ಇದ್ದು ಇವುಗಳಿಗೆ ಪರವಾನಗಿ ನೀಡುವಂತೆ ಸೂಚಿಸಿದರು. ಹಾಗೂ ನಿಯಮದನ್ವಯ 15 ವರ್ಷಗಳಿಗೂ ಮೇಲ್ಪಟ್ಟ ವಾಹನಗಳ ನವೀಕರಣ  ಸಾಧ್ಯವಿಲ್ಲವೆಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕರಪ್ಪ ಮಾತನಾಡಿ, ನಗರದಲ್ಲಿ ಸುಮಾರು 4 ಸಾವಿರ ಆಟೋಗಳು ಚಾಲನೆಯಲ್ಲಿವೆ. ಸುಮಾರು 2 ಸಾವಿರ ಆಟೋಗಳ ನವೀಕರಣ ಬಾಕಿ ಇದೆ ಎಂದರು.

ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ನಗರದಲ್ಲಿ ಕೇವಲ 304 ಅಲ್ಲ, ಸುಮಾರು 1200 ನೋಂದಾಯಿತ ಆಟೋಗಳಿದ್ದು ಅವುಗಳಿಗೆಲ್ಲ ಪರವಾನಗಿ ನೀಡಬೇಕು. ಹಾಗೂ ಶೋ ರೂಮಿನವರು ಆಟೋ ಖರೀದಿ ವೇಳೆ ಪರವಾನಗಿ ಕೊಡಿಸುತ್ತೇವೆಂದು 30 ರಿಂದ 40 ಸಾವಿರದವರೆಗೆ ಹಣ ವಸೂಲಿ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೂ ಆಟೋ ಚಾಲನೆ ವ್ಯಾಪ್ತಿಯನ್ನು 20 ಕಿ.ಮೀ. ವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಳು ಪ್ರತಿಕ್ರಿಯಿಸಿ, ಆನ್‍ಲೈನ್‍ನಲ್ಲಿ ಪರವಾನಗಿ ಬಾಕಿ ಕಡಿಮೆ ತೋರಿಸುತ್ತಿದ್ದು, ಈ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಪರವಾನಗಿ ನೀಡಲಾಗುವುದು. ಹಾಗೂ ಪರವಾನಗಿ ಪಡೆಯದ ಆಟೋಗಳ ನೋಂದಣಿ ನಿಲ್ಲಿಸುವಂತೆ ತಿಳಿಸಿದರು. 

ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಗರದಲ್ಲಿ ಹೊಸದಾಗಿ ಆಟೋ ರಿಕ್ಷಾಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಂಡವರಿಗೆ ಪರವಾನಿಗಿ ನೀಡಬೇಕು. ಹಾಗೂ ನವೀಕರಣಕ್ಕೆ ಅರ್ಹರಾದವರಿಗೆ ನವೀಕರಣ ಮಾಡಬೇಕೆಂದರು ತಿಳಿಸಿದರು.

ಆಟೋ ಚಾಲಕರು ಮಾತನಾಡಿ, ಆಟೋಗಳಿಗೆ ರೆಟ್ರೊ ಎಲೆಕ್ಟ್ರಿಕ್ ಸ್ಟಿಕ್ಕರ್ ಅಳವಡಿಕೆ ಮಾಡಬೇಕೆಂಬ ನಿಯಮವನ್ನು ತರಲಾಗಿದೆ. ಇದರಿಂದ ಚಾಲಕರಿಗೆ ರೂ.2000 ವರೆಗೆ ಖರ್ಚು ಬರುತ್ತದೆ. ಹಾಗೂ ಎಫ್‍ಸಿ ವೇಳೆ ಇದರ ಬಿಲ್ಲನ್ನು ಕೇಳಲಾಗುವುದರಿಂದ ತೊಂದರೆ ಆಗುತ್ತಿದ್ದು, ಸ್ಟಿಕ್ಕರ್‍ನಿಂದ ವಿನಾಯಿತಿ ಕೋರಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸ್ಟಿಕ್ಕರ್ ಹಾಕಿಸುವುದು ಒಳ್ಳೆಯದು. ಸ್ಟಿಕ್ಕರ್ ಅಳವಡಿಕೆ ಕುರಿತಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದಲ್ಲಿನ ಗೊಂದಲದ ಬಗ್ಗೆ ಸಂಬಂಧಿಸಿದ ಆಯುಕ್ತರಿಗೆ ಪತ್ರ ಬರೆದು ಸ್ಪಷ್ಪನೆ ಪಡೆಯಲಾಗುವುದು. ಹಳೇ ಸ್ಟಿಕ್ಕರ್ ಇರುವವರು ಹೊಸದಾಗಿ ಹಾಕಿಸುವ ಅವಶ್ಯಕತೆ ಇಲ್ಲವೆಂದರು. 

ಕೆಲವು ಆಟೋ ಚಾಲಕರು ಓಪನ್ ಪರ್ಮಿಟ್ ನೀಡಿ ವ್ಯಾಪ್ತಿಯನ್ನು 20 ಕಿ.ಮೀ ವರೆಗೆ ವಿಸ್ತರಿಸಬೇಕೆಂದರು. ಮತ್ತು ಹಲವರು ಈಗಾಗಲೇ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಿದ್ದು ಹೊಸ ಪರವಾನಗಿಯನ್ನು ನೀಡಬಾರದೆಂದು ಒತ್ತಾಯಿಸಿದರು.

ನಾಗರೀಕರಾದ ಡಾ.ಶ್ರೀನಿವಾಸನ್‍ರವರು ಮಾತನಾಡಿ, ರೈಲ್ವೇ ನಿಲ್ದಾಣದಲ್ಲಿ ಆಟೋ ಪಾಥ್ ಇದ್ದರೂ ಅಲ್ಲಿ ನಿಲುಗಡೆ ಮಾಡುತ್ತಿಲ್ಲ. ಬದಲಾಗಿ ಒಂದೆಡೆ ಆಟೋಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಕಷ್ಟವಾಗಿದೆ. ಹಾಗೂ ಬಸ್ಸು, ಲಾರಿ ಇತರೆ ವಾಹನಗಳು ಜೋರಾಗಿ ಹಾರ್ನ್ ಮಾಡುತ್ತಿರುವುದರಿಂದ ಕೆಲವು ರಸ್ತೆಗಳಲ್ಲಿ ಅತ್ಯಂತ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರಿದರು.

ಮತೋರ್ವರು ಬೆಳಗ್ಗಿನ ಜಾವ 5 ರ ನಂತರ ಸಹ ಆಟೋದವರು 1 ಅರ್ಧ ಚಾರ್ಜ್ ಮಾಡುತ್ತಿದ್ದಾರೆ. ಮೀಟರ್ ಹಾಕುವುದಿಲ್ಲವೆಂದು ದೂರಿದರು.

ಜಿಲ್ಲಾಧಿಕಾರಿಳು, ಹೀಗೆ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಆಟೋ ನಿಲ್ಲಿಸಿದ ಚಾಲಕರಿಗೆ ಸರ್ಕಲ್ ಇನ್ಸ್’ಪೆಕ್ಟರ್ ದಂಡ ವಿಧಿಸಬೇಕು. ಜೋರಾಗಿ ಹಾರ್ನ್ ಕಂಡುಬಂದಲ್ಲಿ ಪೊಲೀಸ್ ಠಾಣೆಯ ಸಂಖ್ಯೆಗೆ ಒಂದು ದೂರು ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು. ಆಟೋಗಳಲ್ಲಿ ಮೀಟರ್ ಹಾಕಬೇಕು. ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮಾತ್ರ ಒಂದೂ ಅರ್ಧ ಚಾರ್ಜ್ ತೆಗೆದುಕೊಳ್ಳಬೇಕು. ನಂತರ ತೆಗೆದುಕೊಳ್ಳುವ ಹಾಗಿಲ್ಲ. ಈ ಸಮಯ ಮತ್ತು ದರದ ಕುರಿತು ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಬೋರ್ಡ್ ಬರೆಸಿ ಹಾಕಿಸುವಂತೆ ತಿಳಿಸಿದರು.

ಪ್ರೀ-ಪೇಯ್ಡ್ ಕೌಂಟರ್ ತೆರೆಯಲು ಸೂಚನೆ : ಮೊದಲನೇ ಹಂತದಲ್ಲಿ ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಇನ್ನು 20 ದಿನಗಳ ಒಳಗೆ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್‍ಗಳನ್ನು ತೆರೆಯಬೇಕೆಂದು ಆರ್‍ಟಿಓ ಅಧಿಕಾರಿಗೆ ಸೂಚಿಸಿದರು.

ಬಸ್ ಬಿಡಲು ಸೂಚನೆ : ರೈಲು ನಿಲ್ದಾಣದಿಂದ ಬಸ್‍ಸ್ಟ್ಯಾಂಡ್ ಕಡೆ ತೆರಳಲು ಕೆಎಸ್‍ಆರ್‍ಟಿಸಿ ಬಸ್ ಕಾರ್ಯಾಚರಣೆಯನ್ನು 10 ದಿನಗಳ ಒಳಗೆ ಆರಂಭಿಸಬೇಕೆಂದು ಕೆಎಸ್‍ಆರ್‍ಟಿಸಿ ಡಿಸಿ ಯವರಿಗೆ ಸೂಚಿಸಿದ ಅವರು ಬಸ್ ನಿಲ್ದಾಣ ಸ್ಥಳ ನಿಗದಿ ಕುರಿತು ಆರ್‍ಟಿಓ, ಆಟೋ, ಬಸ್ ಚಾಲಕರ ಸಂಘ, ಟ್ರಾಫಿಕ್ ಪೊಲೀಸ್, ಕೆಎಸ್‍ಆರ್‍ಟಿಸಿ ಯವರು ಸರ್ವೇ ಮಾಡಿ ನಿಗದಿಪಡಿಸುವಂತೆ ಸೂಚನೆ ನೀಡಿದರು.

ಸಹ್ಯಾದ್ರಿ ಕಾಲೇಜು ಬಳಿಯ ಕೆಇಬಿ ವೃತ್ತದಲ್ಲಿ ಬಸ್ ಕಾಯುವವರ ಸಂಖ್ಯೆ ಹೆಚ್ಚಿದ್ದು, ಒಂದು ಬಸ್ ಶೆಲ್ಟರ್ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಟಾಧಿಕಾರಿ ಅನಿಲ್‍ಕುಮಾರ್ ಭೂಮರಡ್ಡಿ,  ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕ್ರಪ್ಪ, ಕೆಎಸ್‍ಆರ್‍ಟಿಸಿ ಡಿಸಿ ವಿಜಯಕುಮಾರ್, ಸರ್ಕಲ್ ಇನ್ಸ್‍ಪೆಕ್ಟರ್ ಸಂತೋಷ್ ಸೇರಿದಂತೆ ಅಧಿಕಾರಿಗಳು, ನಾಗರೀಕ ಹಿತ ರಕ್ಷಣಾ ವೇದಿಕೆಯ ವಸಂತಕುಮಾರ್, ಇತರೆ ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದವರು ಇತರರು ಹಾಜರಿದ್ದರು.

'Respond to people's problems': CM's speech to KAS officials ‘ತಹಶೀಲ್ದಾರ್ ಕಚೇರಿಗೆ ಬರುವವರ ಕಣ್ಣೀರು ಒರೆಸುವುದಕ್ಕಿಂತ ಪುಣ್ಯದ ಕೆಲಸ ಬೇರೆ ಇಲ್ಲ: ಕೆಎಎಸ್ ಅಧಿಕಾರಿಗಳಿಗೆ ಸಿಎಂ ಕಿವಿ ಮಾತು Previous post ‘ಜನರ ಸಮಸ್ಯೆಗಳಿಗೆ ಸ್ಪಂದಿಸಿ’ : KAS ಅಧಿಕಾರಿಗಳಿಗೆ ಸಿಎಂ ಕಿವಿ ಮಾತು 
ADGP Khadak notice to reduce rowdism..! ರೌಡಿಸಂ ಮಟ್ಟ ಹಾಕಲು ಎಡಿಜಿಪಿ ಖಡಕ್ ಸೂಚನೆ! Next post ರೌಡಿಸಂ ಮಟ್ಟ ಹಾಕಲು ಎಡಿಜಿಪಿ ಖಡಕ್ ಸೂಚನೆ..!