
ರೌಡಿಸಂ ಮಟ್ಟ ಹಾಕಲು ಎಡಿಜಿಪಿ ಖಡಕ್ ಸೂಚನೆ..!
ಶಿವಮೊಗ್ಗ, ಜ. 5: ‘ರೌಡಿ ಶೀಟರ್ (rowdy sheeter) ಗಳ ಚಟುವಟಿಕೆಗಳ ಮೇಲೆ ನಿಗಾವಹಿಸಬೇಕು. ಗೂಂಡಾ ಕಾಯ್ದೆ (goonda act) ಹಾಗೂ ಮುಂಜಾಗ್ರತ ಕ್ರಮದ ಅಡಿಯಲ್ಲಿ ಕೇಸ್ ದಾಖಲಿಸುವುದು ಸೇರಿದಂತೆ ಗಡಿಪಾರುಗೊಳಿಸುವ ಕ್ರಮಕೈಗೊಳ್ಳಬೇಕು’ ಎಂದು ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ (ADGP) ಹಿತೇಂದ್ರ ಆರ್ ಅವರು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಇಂದು ಶಿವಮೊಗ್ಗ (shimoga) ನಗರದ ಡಿಎಆರ್ ಮೈದಾನದಲ್ಲಿ ಸೇವಾ ಪರೇಡ್ ವೀಕ್ಷಣೆ ನಡೆಸಿ ಗೌರವ ವಂದನೆ ಸ್ವೀಕರಿಸಿದರು. ನಂತರ ಸಭಾಂಗಣದಲ್ಲಿ ನಡೆದ ಅಪರಾಧ ವಿಮರ್ಶನಾ ಸಭೆಯಲ್ಲಿ ಅವರು ಮಾತನಾಡಿದರು.
ಸಂಘಟಿತ ಅಪರಾಧಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಮಾದಕ ದ್ರವ್ಯ ಮಾರಾಟ ಮತ್ತು ಮಾದಕ ದ್ರವ್ಯ ವ್ಯಸನಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದೇ ವೇಳೆ ಉತ್ತಮ ಕರ್ತವ್ಯ ನಿರ್ವಹಣೆ ಮಾಡುವ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ಹಿತೇಂದ್ರ ಆರ್ ಅವರು ಸಲಹೆಗಳನ್ನು ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಎಸ್ಪಿ ಕಚೇರಿ, ಠಾಣೆಗೆ ಭೇಟಿ : ಸಭೆಯ ನಂತರ ಹಿತೇಂದ್ರ ಆರ್ ಅವರು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ಹಾಗೂ ವಿನೋಬನಗರ ಪೊಲೀಸ್ ಠಾಣೆ (police station) ಗೆ ಭೇಟಿಯಿತ್ತು ವೀಕ್ಷಣೆ ನಡೆಸಿದರು. ಕಚೇರಿ ಸ್ವಚ್ಛತೆ, ಕಾರ್ಯವೈಖರಿಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಸಿಬ್ಬಂದಿಗಳಿಗೆ ಸಲಹೆ – ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಪೂರ್ವ ವಲಯ ಡಿಐಜಿಪಿ ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.