
ಶಾಲಾ ವಾಹನಗಳ ಸುರಕ್ಷತೆ : ಸಿಸಿ ಕ್ಯಾಮರಾ ಅಳವಡಿಕೆ, ಚಾಲಕರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ಕಡ್ಡಾಯ!
ನಿಯಮ ಪಾಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ದ ಕಠಿಣ ಕ್ರಮಕ್ಕೆ ಸೂಚನೆ
ಬೆಂಗಳೂರು, ಜ. 5: ಶಾಲಾ ಮಕ್ಕಳ ಬಸ್ ಗಳಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆ ಕುರಿತಂತೆ, ಶಾಲಾ ಶಿಕ್ಷಣ ಇಲಾಖೆ 8 ಅಂಶಗಳನ್ನೊಳಗೊಂಡ ಸುತ್ತೋಲೆ ಹೊರಡಿಸಿದೆ. ನಿಯಮಗಳ ಕಡ್ಡಾಯ ಪಾಲನೆಗೆ ಆದೇಶ ಹೊರಡಿಸಿದೆ.
ಇತ್ತೀಚೆಗೆ ಕೆಲ ಖಾಸಗಿ ಶಾಲಾ ವಾಹನಗಳಲ್ಲಿ ಮಕ್ಕಳು ಪ್ರಯಾಣಿಸುವಾಗ ಚಾಲಕರು ಮತ್ತು ಸಹಾಯಕರಿಂದ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ಬಸ್, ವ್ಯಾನ್, ಆಟೋ, ರಿ್ಕ್ಷಾ ಹಾಗೂ ಇತರೆ ಶಾಲಾ ವಾಹನಗಳಲ್ಲಿ ನಿಯಮಗಳ ಪಾಲನೆಗೆ ಶಿಕ್ಷಣ ಇಲಾಖೆ ಸೂಚಿಸಿದೆ.
ಸುರಕ್ಷತಾ ನಿಯಮಗಳು : ಶಾಲಾ ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡಬೇಕು. ಸಂಬಂಧಿಸಿದ ವಾಹನ ಚಾಲಕರು ಮತ್ತು ಸಹಾಯಕರ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ನಡೆಸಿ, ನಡವಳಿಕೆ ಪ್ರಮಾಣಪತ್ರ ಪಡೆಯುವಂತೆ ಸೂಚಿಸಲಾಗಿದೆ.
ಮಕ್ಕಳನ್ನು ಕರೆತರುವ ಸಹಾಯಕರನ್ನಾಗಿ ಮಹಿಳೆಯನ್ನು ನೇಮಿಸಿಕೊಳ್ಳಬೇಕು. ಶಾಲಾ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವುದನ್ನು ನಿರ್ಬಂಧಿಸಬೇಕು.
ಚಾಲಕರು, ಸಹಾಯಕರು ಪ್ರತಿದಿನ ಕೆಲಸ ಪ್ರಾರಂಭಿಸುವ ಮೊದಲು ಮತ್ತು ಕೊನೆಯಲ್ಲಿ ಶಾಲಾ ಮುಖ್ಯಸ್ಥರ ಸಮ್ಮುಖದಲ್ಲಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕು.
ಸದರಿ ದಾಖಲೆಯನ್ನು ಶಾಲೆಗಳು ಪ್ರತಿ ವರ್ಷ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.