
ಶಿವಮೊಗ್ಗ : ಪೂರ್ಣ ಹಂತಕ್ಕೆ ವರ್ತುಲಾಕಾರದ ಫ್ಲೈ ಓವರ್ ಕಾಮಗಾರಿ – ಉದ್ಘಾಟನೆ ಯಾವಾಗ?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜ. 7: ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಈಗಾಗಲೇ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಇದೀಗ ನಗರದ ವಿದ್ಯಾನಗರದ ಬಳಿ ನಿರ್ಮಿಸಲಾಗುತ್ತಿದ್ದ, ವರ್ತುಲಾಕಾರದ ಫ್ಲೈ ಓವರ್ ಕಾಮಗಾರಿಯೂ ಪೂರ್ಣ ಹಂತಕ್ಕೆ ಬಂದಿದೆ. ಇಷ್ಟರಲ್ಲಿಯೇ ಸಾರ್ವಜನಿಕರ ಸೇವೆಗೆ ಮುಕ್ತಗೊಳ್ಳುವ ಸಾಧ್ಯತೆಯಿದೆ.
ಭಾನುವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಫ್ಲೈ ಓವರ್ ಕಾಮಗಾರಿಯ ಖುದ್ದು ವೀಕ್ಷಣೆ ಮಾಡಿದರು. ರಾಷ್ಟ್ರೀಯ ಹೆದ್ಧಾರಿ ಇಲಾಖೆ ಎಂಜಿನಿಯರ್ ಗಳಿಂದ ಮಾಹಿತಿ ಪಡೆದುಕೊಂಡರು.

ಬಾಕಿ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಜಿನಿಯರ್ ಪೀರ್ ಪಾಷಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಜನ – ವಾಹನ ಸಂಚಾರಕ್ಕೆ ಅನುಕೂಲ : ವಿದ್ಯಾನಗರದ ಮೇಲ್ಸೇತುವೆ ಕಾಮಗಾರಿಯು ಕಳೆದ ಸರಿಸುಮಾರು ಎರಡು ವರ್ಷದಿಂದ ನಡೆಯುತ್ತಿತ್ತು. ಕಾಮಗಾರಿ ವಿಳಂಬ ಕಾರಣದಿಂದ ಸದರಿ ಸ್ಥಳದಲ್ಲಿ ಜನ – ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಸದರು ರಾಷ್ಟ್ರೀಯ ಹೆದ್ದಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.

ವಿಶಿಷ್ಟ ಫ್ಲೈ ಓವರ್ : ಸದರಿ ಫ್ಲೈ ಓವರ್ ವರ್ತುಲಾಕಾರದಿಂದ ಕೂಡಿರುವುದು ವಿಶಿಷ್ಠತೆಗಳಲ್ಲೊಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದ ಯೋಜನೆಯಾಗಿದ್ದು, 43 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 920 ಮೀಟರ್ ಉದ್ದವಿದೆ.