
ದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ..!
ಶಿವಮೊಗ್ಗ, ಫೆ. 16: ನೂತನ ಶಿವಮೊಗ್ಗ ಏರ್’ಪೋರ್ಟ್ ನಲ್ಲಿ ಫೆ. 27 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿರವರ ವಿಮಾನವೇ ಮೊದಲಿಗೆ ಲ್ಯಾಂಡಿಂಗ್ ಆಗಲಿದೆ. ಅಂದು ದೆಹಲಿಯಿಂದ ನೇರವಾಗಿ ಶಿವಮೊಗ್ಗಕ್ಕೆ ವಿಮಾನದಲ್ಲಿ ಪ್ರಧಾನಿ ಆಗಮಿಸುತ್ತಿದ್ದಾರೆ.
‘ಫೆ.27 ರಂದು ವಿಮಾನ ನಿಲ್ದಾಣ ಆವರಣದಲ್ಲಿಯೇ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ – ಶಂಕುಸ್ಥಾಪನೆಯ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಸರಿಸುಮಾರು 12 ಗಂಟೆ ನಂತರ ಪ್ರಧಾನಿ ಅವರ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 4 ಗಂಟೆಯ ವೇಳೆಗೆ ಎಲ್ಲ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ. ಪ್ರಧಾನಮಂತ್ರಿಯವರ ವಿಮಾನವೇ ಮೊದಲಿಗೆ ಲ್ಯಾಂಡಿಂಗ್ ಆಗಲಿದೆ’ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಈಗಾಗಲೇ ಡಿಜಿಸಿಎ ಸೇರಿದಂತೆ ವಿವಿಧ ತಂಡಗಳು ನಿಲ್ದಾಣದ ಪರಿಶೀಲನೆ ನಡೆಸಿವೆ. ಇನ್ನೆರೆಡು ದಿನಗಳಲ್ಲಿ ಲೈಸೈನ್ಸ್ ದೊರಕಲಿದೆ. ಈಗಾಗಲೇ ಇಂಡಿಗೋ ಹಾಗೂ ಸ್ಟಾರ್ ಏರ್ ಲೈನ್ಸ್ ಗಳು, ಶಿವಮೊಗ್ಗದಿಂದ ವಿಮಾನ ಸಂಚಾರಕ್ಕೆ ನಿರ್ಧರಿಸಿವೆ ಎಂದರು.
ಶಿವಮೊಗ್ಗದಿಂದ ಎಲ್ಲೆಲ್ಲಿಗೆ ವಿಮಾನ ಸಂಚಾರ ಆರಂಭವಾಗಲಿದೆ ಎಂಬುವುದು ಪ್ರಧಾನಿಯವರೇ ಅದಿಕೃತವಾಗಿ ಪ್ರಕಟಿಸಲಿದ್ದಾರೆ. ಉದ್ಘಾಟನೆಯಾದ 15-20 ದಿನಗಳ ನಂತರ, ಅಧಿಕೃತವಾಗಿ ವಿಮಾನಗಳ ಸಂಚಾರ ಆರಂಭವಾಗಲಿದೆ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.
ಮುಂಬೈ, ಗೋವಾ ಸೇರಿದಂತೆ ಯಾವ್ಯಾವ ಪ್ರದೇಶಳಿಗೆ ವಿಮಾನ ಓಡಿಸಿದರೆ ಲಾಭವಾಗಲಿದೆ ಎಂಬುವ ನಿಟ್ಟಿನಲ್ಲಿ ಶಿವಮೊಗ್ಗಕ್ಕೆ ಆಗಮಿಸುವ ಹಾಗೂ ಇಲ್ಲಿಂದ ಪ್ರಮುಖ ಸ್ಥಳಗಳಿಗೆ ತೆರಳುವ ಪ್ರಯಾಣಿಕರ ದಟ್ಟಣೆಯ ಸರ್ವೇ ಕಾರ್ಯವನ್ನು ವಿಮಾನಯಾನ ಸಂಸ್ಥೆಗಳು ನಡೆಸುತ್ತಿವೆ.
ಒಟ್ಟಾರೆ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅತ್ಯಾಧುನಿಕವಾಗಿ ಅಭಿವೃದ್ದಿಪಡಿಸಲಾಗಿದೆ. ಇಡೀ ರಾಷ್ಟ್ರಮಟ್ಟದಲ್ಲಿಯೇ ಪ್ರಮುಖ ನಿಲ್ದಾಣಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ಬಿ.ವೈ.ರಾಘವೇಂದ್ರ ಹೇಳಿದ್ದಾರೆ.