
ಲೋಕಸಭೆ ಚುನಾವಣೆ ಎಫೆಕ್ಟ್ : ನೆನೆಗುದಿಗೆ ಬಿದ್ದ ಮಹಾನಗರ ಪಾಲಿಕೆ ಎಲೆಕ್ಷನ್!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜ. 8: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ, ಈಗಾಗಲೇ ಅಧಿಕಾರಾವಧಿ ಪೂರ್ಣಗೊಂಡಿರುವ ಶಿವಮೊಗ್ಗ ಹಾಗೂ ಮೈಸೂರು ಮಹಾನಗರ ಪಾಲಿಕೆಗಳ ವಾರ್ಡ್ ಚುನಾವಣೆ ನೆನೆಗುದಿಗೆ ಬೀಳುವಂತಾಗಿದೆ!
ಈಗಾಗಲೇ ಶಿವಮೊಗ್ಗ, ಮೈಸೂರು ಪಾಲಿಕೆಗಳ ಜನಪ್ರತಿನಿಧಿಗಳ ಅಧಿಕಾರಾವಧಿ ಪೂರ್ಣಗೊಂಡಿದೆ. ಎರಡು ಪಾಲಿಕೆಗಳಿಗೆ ಆಡಳಿತಾಧಿಕಾರಿಗಳ ನೇಮಿಸಲಾಗಿದೆ. ತುಮಕೂರು ಪಾಲಿಕೆ ಜನಪ್ರತಿನಿಧಿಗಳ ಅಧಿಕಾರಾವಧಿ ಪೂರ್ಣಕ್ಕೆ ಇನ್ನೊಂದು ತಿಂಗಳು ಬಾಕಿಯಿದೆ.
ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಈ ಮೂರು ಪಾಲಿಕೆಗಳಿಗೆ ವಾರ್ಡ್ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಬೇಕಾಗಿತ್ತು. ಆದರೆ ಇಲ್ಲಿಯವರೆಗೂ ಚುನಾವಣೆಗೆ ಸಂಬಂಧಿಸಿದ, ಯಾವುದೇ ಪೂರ್ವಭಾವಿ ಸಿದ್ದತೆಗಳು ಆರಂಭವಾಗಿಲ್ಲ. ಇದರಿಂದ ಮೂರು ಕಾರ್ಪೋರೇಷನ್ ಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲವಾಗಿದೆ.
ಏಪ್ರೀಲ್ – ಮೇ ತಿಂಗಳಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇದಕ್ಕೂ ಪೂರ್ವದಲ್ಲಿ ಮೂರು ಪಾಲಿಕೆಗಳ ಚುನಾವಣೆ ನಡೆದು ವ್ಯತಿರಿಕ್ತ ಫಲಿತಾಂಶ ಹೊರಬಂದರೆ, ಲೋಕಸಭೆ ಚುನಾವಣೆ ವೇಳೆ ಸದರಿ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ ಮೇಲೆ ಎಲ್ಲಿ ಪರಿಣಾಮ ಬೀರುತ್ತದೆಯೋ ಎಂಬ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪಾಲಿಕೆ ಎಲೆಕ್ಷನ್ ಗೆ ನಿರಾಸಕ್ತಿ ತಳೆದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರಲಾರಂಭಿಸಿದೆ.
ಈ ಎಲ್ಲ ಕಾರಣಗಳಿಂದ ಲೋಕಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮೂರು ಪಾಲಿಕೆಗಳ ಚುನಾವಣೆ ನಡೆಯುವ ಸಾಧ್ಯತೆಗಳು ಗೋಚರವಾಗುತ್ತಿವೆ. ಇದರಿಂದ ಅಧಿಕಾರಾವಧಿ ಪೂರ್ಣಗೊಂಡಿರುವ ಪಾಲಿಕೆಗಳಲ್ಲಿ, ಕಾರ್ಪೋರೇಟರ್ ಗಳ ದರ್ಬಾರ್ ಗೆ ಇನ್ನೂ ಕೆಲ ತಿಂಗಳುಗಳ ಕಾಲ ಆಸ್ಪದವಿಲ್ಲದಂತಾಗಿದೆ.
ಗ್ರಾಪಂ ಅಧೀನದ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ
*** ಗ್ರಾಮೀಣ ಭಾಗದಲ್ಲಿರುವ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಸೇರ್ಪಡೆ ಮಾಡುವ ಕುರಿತಂತೆ, ಪ್ರಸ್ತಾವನೆ ಸಲ್ಲಿಸುವಂತೆ ಪೌರಾಡಳಿತ ನಿರ್ದೇಶನಾಲಯವು ರಾಜ್ಯದ ಎಲ್ಲ ಜಿಲ್ಲಾ ನಗರಾಭಿವೃದ್ದಿ ಕೋಶಗಳಿಗೆ ಕಳೆದ ತಿಂಗಳು ಸೂಚನೆ ನೀಡಿದೆ. ಈ ಸೂಚನೆಯ ಆಧಾರದ ಮೇಲೆ ಶಿವಮೊಗ್ಗ ನಗರಾಭಿವೃದ್ದಿ ಕೋಶವು ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದೆ. ತಮ್ಮ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯ್ತಿ ಪ್ರದೇಶವನ್ನು ಅಥವಾ ಒಂದು ಪ್ರದೇಶದ ನಗರ ಸ್ಥಳೀಯ ಸಂಸ್ಥೆಯನ್ನು ಇನ್ನೊಂದು ಪ್ರದೇಶದ ನಗರ ಸ್ಥಳೀಯ ಸಂಸ್ಥೆಯೊಂದಿಗೆ ಜೋಡಣೆ ಮಾಡಿ ಅವಳಿ ನಗರವೆಂದು ಪರಿಗಣಿಸುವ ಸಂಬಂಧ ಅರ್ಹ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದೆ.
ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಆಗ್ರಹ
*** ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಮಾಡಬೇಕು. ವಾರ್ಡ್ ಗಳ ಸಂಖ್ಯೆ ಹೆಚ್ಚಳ ಮಾಡಬೇಕೆಂಬ ಆಗ್ರಹ ಕೇಳಿಬರಲಾರಂಭಿಸಿದೆ. 1997-98 ರ ಅವಧಿಯಲ್ಲಿ ನಗರದಂಚಿನ ಗ್ರಾಮ ಪಂಚಾಯ್ತಿ ಅಧೀನದ ಪ್ರದೇಶಗಳನ್ನು ಅಂದಿನ ನಗರಸಭೆಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ತದನಂತರ ಇಲ್ಲಿಯವರೆಗೂ ನಗರದಂಚಿನ ಗ್ರಾಪಂ ಅಧೀನದ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡಿಲ್ಲ. ನಗರದ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ನಗರ ವ್ಯಾಪ್ತಿ ನಿಗದಿಗೊಳಿಸಬೇಕು. ನಗರದಂಚಿನ ಗ್ರಾಪಂ ಅಧೀನದ ಪ್ರದೇಶಗಳನ್ನು ಸೇರ್ಪಡೆ ಮಾಡಿ, 50 ರಿಂದ 60 ವಾರ್ಡ್ ಗಳನ್ನು ಪಾಲಿಕೆ ಸೃಜಿಸಬೇಕೆಂಬ ಒತ್ತಾಯವಿದೆ.