
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟದ ವಿರುದ್ಧ ಆಕ್ರೋಶ!
ಹಾಲಿನ ಖರೀದಿ ದರ ಇಳಿಕೆ : ರಸ್ತೆಗೆ ಹಾಲು ಸುರಿದು ರೈತರಿಂದ ಬೃಹತ್ ಪ್ರತಿಭಟನೆ!
ಶಿವಮೊಗ್ಗ, ಜ. 9: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟವು ರೈತರಿಂದ ಖರೀದಿಸುವ ಹಾಲಿನ ದರ ಕಡಿತ ಮಾಡಿರುವುದನ್ನು ವಿರೋಧಿಸಿ, ಮಂಗಳವಾರ ಮಾಚೇನಹಳ್ಳಿಯಲ್ಲಿರುವ ಶಿಮುಲ್ ಕಚೇರಿ ಎದುರು ರೈತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಭಾರತೀಯ ಕಿಸಾನ್ ಸಂಘ – ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಶಿಮುಲ್ ಎದುರಿನ ರಾಷ್ಟ್ರೀಯ ಹೆದ್ಧಾರಿ ತಡೆ ನಡೆಸಿ ರೈತರು ಪ್ರತಿಭಟಿಸಿದರು. ಈ ವೇಳೆ ರಸ್ತೆಗೆ ಹಾಲು ಸುರಿದು, ಶಿಮುಲ್ ವಿರುದ್ದ ಘೋಷಣೆ ಕೂಗಿ ರೈತರು ಅಸಮಾಧಾನ ಹೊರ ಹಾಕಿದರು.
ದರ ಇಳಿಕೆ : ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ ನೀಡುವ ದರದಲ್ಲಿ ನಿರಂತರವಾಗಿ ಇಳಿಕೆ ಮಾಡಿಕೊಂಡು ಬರುತ್ತಿದೆ. ಕಳೆದ ಆಗಸ್ಟ್ ನಲ್ಲಿ ಖರೀದಿ ದರ ಇಳಿಕೆ ಮಾಡಲಾಗಿತ್ತು. ನಂತರ ನವೆಂಬರ್ ನಲ್ಲಿ ಮತ್ತೇ ಇಳಿಸಲಾಗಿತ್ತು. ಒಟ್ಟಾರೆ ಪ್ರತಿ ಲೀಟರ್ ಗೆ 3.75 ರೂ. ಇಳಿಕೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪ್ರಸ್ತುತ ಬರಗಾಲ ಆವರಿಸಿದೆ. ಹೈನುಗಾರಿಕೆಯ ಮೂಲಕ ರೈತರು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕಾದ ಹಾಲು ಒಕ್ಕೂಟವು, ದರ ಇಳಿಕೆ ಮಾಡಿ ಗಾಯದ ಮೇಲೆ ಬರ ಹಾಕುವ ಕಾರ್ಯ ನಡೆಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಲಿನ ಖರೀದಿ ದರ ಕಡಿಮೆ ಮಾಡಿರುವ ಆದೇಶ ವಾಪಾಸ್ ಪಡೆಯಬೇಕು. ಪಶು ಉತ್ಪನ್ನಗಳ ಬೆಲೆ ಕಡಿಮೆ ಮಾಡಬೇಕು. ಹಸುಗಳು ಅನಾರೋಗ್ಯಕ್ಕೆ ತುತ್ತಾದ ವೇಳೆ ಸಕಾಲದಲ್ಲಿ ಡೈರಿ ಡಾಕ್ಟರ್ ಗಳು ಆಗಮಿಸಿ ಚಿಕಿತ್ಸೆ ಕೊಡಿಬೇಕು. ಮೇವಿನ ಬೀಜಗಳನ್ನು ಡೈರಿಗಳ ಮೂಲಕ ಪೂರೈಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಆಗ್ರಹಿಸಿದೆ.
ವಿದೇಶಿ ಪ್ರವಾಸ, ಅನಗತ್ಯ ದುಂದು ವೆಚ್ಚ ಕಡಿತಕ್ಕೆ ಆಗ್ರಹ
*** ಆಡಳಿತ ಮಂಡಳಿಯು ತನ್ನ ವೆಚ್ಚವನ್ನು ತಗ್ಗಿಸಬೇಕು. ಅಧ್ಯಯನದ ನೆಪದಲ್ಲಿ ವಿದೇಶಿ ಪ್ರವಾಸ, ಅಗತ್ಯವಿಲ್ಲದಿದ್ದರೂ ವಾಹನಗಳ ಬಳಕೆ ಸೇರಿದಂತೆ ಇತರೆ ದುಂದು ವೆಚ್ಚಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಮಾರುಕಟ್ಟೆ ವಿಸ್ತರಣೆಗೆ ಆದ್ಯತೆ ನೀಡಬೇಕು. ಒಕ್ಕೂಟ ಉತ್ಪಾದಿಸಿದ ಹಾಲಿನ ಉಪ ಉತ್ಪನ್ನಗಳು ಮುಕ್ತ ಮಾರುಕಟ್ಟೆಯಲ್ಲಿ ಎಲ್ಲೆಡೆ ಲಭ್ಯವಾಗಿಸುವ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಶಿಮುಲ್ ಆಡಳಿತಕ್ಕೆ ಸಲಹೆ ನೀಡಿದ್ದಾರೆ.