
ಮುಂಬೈನಲ್ಲಿ ಕ್ರಿಕೆಟ್ ಆಟದ ವೇಳೆ ತಲೆಗೆ ಚೆಂಡು ಬಡಿದು ಆಟಗಾರ ಸಾವು!
ಮುಂಬೈ, ಜ. 10: ಕ್ರಿಕೆಟ್ ಆಟವಾಡುವ ವೇಳೆ ತಲೆಗೆ ಚೆಂಡು ಬಡಿದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮುಂಬೈನಲ್ಲಿ ಸೋಮವಾರ ನಡೆದಿದೆ.
ಉದ್ಯಮಿ ಜಯೇಶ್ ಚುನ್ನಿಲಾಲ್ ಸಾವ್ಲಾ (52) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಮುಂಬೈನ ಮಾಟುಂಗಾ ಜಿಮ್ಖಾನಾ ದಾಡ್ಕರ್ ಮೈದಾನದಲ್ಲಿ ಈ ಘಟನೆ ನಡೆದಿದೆ. ಕಚ್ಚಿ ಸಮುದಾಯದವರು 50 ವರ್ಷ ಮೇಲ್ಪಟ್ಟವರಿಗೆ ಹಮ್ಮಿಕೊಂಡಿದ್ದ, ‘ಕಚ್ಚಿ ವೀಸಾ ಓಸ್ವಾಲ್ ವಿಕಾಸ್ ಲೆಜೆಂಡ್ ಕಪ್’ ಟಿ – 20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ದುರಂತ ಸಂಭವಿಸಿದೆ.
ಕ್ರಿಕೆಟ್ ಆಟದ ವೇಳೆ ಜಯೇಶ್ ಸಾವ್ಲಾ ಫೀಲ್ಡಿಂಗ್ ಮಾಡುತ್ತಿದ್ದರು. ಸಮಯಾವಕಾಶದ ಕೊರತೆಯಿಂದ ಒಂದೇ ಮೈದನಾದ ಎರಡು ಕಡೆ ಏಕಕಾಲಕ್ಕೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಜಯೇಶ್ ಅವರು ಫೀಲ್ಡಿಂಗ್ ಮಾಡುತ್ತಿದ್ದ ವೇಳೆ, ಮತ್ತೊಂದು ಕಡೆ ನಡೆಯುತ್ತಿದ್ದ ಪಂದ್ಯದ ಬ್ಯಾಟ್ಸ್’ಮನ್ ಹೊಡೆದ ಚೆಂಡು ಅವರ ತಲೆಯ ಹಿಂಬದಿಗೆ ಬಡಿದಿತ್ತು.
ಸ್ಥಳದಲ್ಲಿಯೇ ಅವರು ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.