
ಗಂಡು ಮಗುವಿಗೆ ಜನ್ಮವಿತ್ತ 9 ನೇ ತರಗತಿ ಬಾಲಕಿ!
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದ ಘಟನೆ : ತುಮಕೂರು ಜಿಲ್ಲೆ ಮಧುಗಿರಿಯ ಸರ್ಕಾರಿ ಹಾಸ್ಟೆಲ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿನಿ
ಬಾಗೇಪಲ್ಲಿ / ಮಧುಗಿರಿ, ಜ. 11: ಸರ್ಕಾರಿ ಹಾಸ್ಟೆಲ್ ನಲ್ಲಿದ್ದುಕೊಂಡು ಅಭ್ಯಾಸ ನಡೆಸುತ್ತಿದ್ದ ಬಡ ಕುಟುಂಬಕ್ಕೆ ಸೇರಿದ ಬಾಲಕಿಯೋರ್ವಳು, ಗಂಡು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ!
ಸದ್ಯ ಬಾಲಕಿ ಹಾಗೂ ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ತಾಯಿ – ಮಗು ಕ್ಷೇಮವಾಗಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇರೆಗೆ ಸರ್ಕಾರಿ ಹಾಸ್ಟೆಲ್ ನ ಮಹಿಳಾ ವಾರ್ಡನ್ ರನ್ನು ಅಮಾನತ್ತುಗೊಳಿಸಲಾಗಿದೆ. ಹಾಗೆಯೇ ಬಾಗೇಪಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಏನೀದು ಪ್ರಕರಣ? : 14 ವರ್ಷದ ಬಾಲಕಿಯು ತುಮಕೂರು ಜಿಲ್ಲೆ ಮಧುಗಿರಿಯ ಸರ್ಕಾರಿ ಹಾಸ್ಟೆಲ್ ವೊಂದರದ್ದುಕೊಂಡು ಅಭ್ಯಾಸ ಮಾಡುತ್ತಿದ್ದಳು. ಅನಾರೋಗ್ಯದಿಂದ ಹಾಸ್ಟೆಲ್ ನಿಂದ ಬಾಗೇಪಲ್ಲಿಯಲ್ಲಿನ ಮನೆಗೆ ಹಿಂದಿರುಗಿದ್ದಳು.
ಹೊಟ್ಟೆ ನೋವಿನ ಕಾರಣದಿಂದ ತಾಯಿಯ ಜೊತೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಪಡೆದಿದ್ದಳು. ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ಮತ್ತೊಂದು ಇಂಜೆಕ್ಷನ್ ಮಾಡಲಾಗಿತ್ತು.
ನಂತರ ಸ್ಕ್ಯಾನಿಂಗ್ ಕೂಡ ನಡೆಸಲಾಗಿತ್ತು. ತದನಂತರ ಬಾಲಕಿಗೆ ಹೆರಿಗೆಯಾಗಿದ್ದು, 2.2 ಕೆ.ಜಿ. ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಅಪ್ರಾಪ್ತೆಯಾಗಿದ್ದ ಕಾರಣದಿಂದ, ಆಸ್ಪತ್ರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಲಕಿ ಮತ್ತು ಮಗುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.
ಪೊಲೀಸರು ಬಾಲಕಿಯಿಂದ ಮಾಹಿತಿ ಕಲೆ ಹಾಕುವ ಕಾರ್ಯ ನಡೆಸುತ್ತಿದ್ದು, ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
ಹೆರಿಗೆ ಆಗುವವರೆಗೂ ಗರ್ಭೀಣಿಯಾಗಿದ್ದು ಗೊತ್ತಾಗಿಲ್ಲ!
*** ಬಾಲಕಿಯು ಹೆರಿಗೆಯಾಗುವವರೆಗೂ ಗರ್ಭೀಣಿಯಾಗಿದ್ದ ಸಂಗತಿ ಮನೆಯವರಿಗಾಗಲಿ, ಹಾಸ್ಟೆಲ್ ನವರಿಗಾಗಲಿ ಗೊತ್ತಾಗಿಲ್ಲ. ಕರ್ತವ್ಯ ಲೋಪದ ಆರೋಪದ ಮೇರೆಗೆ ಮಧುಗಿರಿ ಸರ್ಕಾರಿ ಹಾಸ್ಟೆಲ್ ನ ವಾರ್ಡನ್ ರನ್ನು ಅಮಾನತ್ತುಗೊಳಿಸಲಾಗಿದೆ. ಜೊತೆಗೆ ಹಾಸ್ಟೆಲ್ ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.