
‘ಜ. 22 ರ ನಂತರ ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ’ : ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ
ಶಿವಮೊಗ್ಗ, ಜ. 12 : ಜನವರಿ 22 ರ ನಂತರ ಅಯೋಧ್ಯೆಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಅವರು ಇಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಿಸಿ ಬಿಜೆಪಿ ರಾಜಕೀಯ ಮಾಡಲು ಹೊರಟಿದ್ದಾರೆ. ದೇವರನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಳ್ಳುವುದನ್ನು ನಾವು ವಿರೋಧಿಸುತ್ತೇವೆಯೇ ಹೊರತು ಶ್ರೀ ರಾಮಚಂದ್ರನನ್ನು ವಿರೋಧಿಸುವುದಿಲ್ಲ.22 ನೇ ತಾರೀಖಿನ ನಂತರ ಅಯೋಧ್ಯೆಗೆ ಭೇಟಿ ನೀಡುವುದಾಗಿ ಹೇಳಿದರು.
ಇಡೀ ರಾಜ್ಯದಲ್ಲಿ ನಮ್ಮ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ದೇವರನ್ನು ಬಳಸಿ ಬಿಜೆಪಿ ಮಾಡುತ್ತಿರುವ ರಾಜಕೀಯವನ್ನು ನಾವು ವಿರೋಧಿಸುತ್ತೇವೆ ಎಂದರು.
ಮೂವರು ಡಿಸಿಎಂ ಬಗ್ಗೆ ಚರ್ಚಿಸುವುದಿಲ್ಲ : ಮೂರು ಡಿಸಿಎಂ ಸ್ಥಾನದ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮದವರಿಗೆ ಈ ಬಗ್ಗೆ ಚರ್ಚಿಸುವುದಿಲ್ಲ ಎಂದು ಉತ್ತರ ನೀಡಲು ಮುಖ್ಯಮಂತ್ರಿಗಳು ನಿರಾಕರಿಸಿದರು.
ಸುಳ್ಳು ಎಂದರೆ ಕುಮಾರಸ್ವಾಮಿ : ಗ್ಯಾರಂಟಿ ಯೋಜನೆಗಳ ಬಗ್ಗೆ ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಟೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು , ಕುಮಾರಸ್ವಾಮಿ ಅಂದರೆ ಸುಳ್ಳು, ಸುಳ್ಳು ಎಂದರೆ ಕುಮಾರಸ್ವಾಮಿ. ಅವರ ಟೀಕೆಗೆ ನಾನು ಉತ್ತರಿಸುವುದಿಲ್ಲ ಎಂದರು.
ನುಂಗಲಾರದ ತುತ್ತು : ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷ ನಾಯಕರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಪಕ್ಷಗಳು ತಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಗ್ಯಾರಂಟಿಗಳನ್ನು ನೀಡಿಲ್ಲವಾದ್ದರಿಂದ ಅವರಿಗೆ ಈ ಯೋಜನೆಗಳು ನುಂಗಲಾರದ ತುತ್ತಾಗಿವೆ ಎಂದರು.
ಗ್ಯಾರಂಟಿಗಳ ಮೂಲಕ ಜನರಿಗೆ ಆರ್ಥಿಕ, ಸಾಮಾಜಿಕ ಶಕ್ತಿ
ಬಡವರು ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗೆ ಬರುವಂತಾಗಬೇಕೆಂಬ ಉದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯದ ತತ್ವದಂತೆ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. 1.18 ಕೋಟಿ ಮಹಿಳಾ ಯಜಮಾನಿಗೆ ತಿಂಗಳಿಗೆ 2000 ನೀಡುತ್ತಿರುವುದು ಸತ್ಯವಲ್ಲವೇ ? ಇದುವರೆಗೆ ಯಾವುದೇ ಜಾತಿ ಧರ್ಮ ಭಾಷೆ ಬೇಧವಿಲ್ಲದೇ 130 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಪ್ರಯಾಣಿಸಿರುವುದು ಸುಳ್ಳಾಗುವುದು ಸಾಧ್ಯವೇ? 200 ಯೂನಿಟ್ ವರೆಗೆ ಉಚಿತ ವಿದ್ಯುತ್1.51 ಕೋಟಿ ಜನರಿಗೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಡಿ 170 ರೂ. ಫಲಾನುಭವಿಗಳಿಗೆ ತಲುಪುತ್ತಿದೆ. ಈ ಎಲ್ಲ ಸತ್ಯಗಳನ್ನು ಪರಿಶೀಲನೆ ನಡೆಸಿ ಮಾಧ್ಯಮದವರು ಸತ್ಯವಾದುದನ್ನು ಬರೆಯಬೇಕು ಎಂದರು.
ಬಡವರಿಗೆ ಆರ್ಥಿಕ ಶಕ್ತಿ ತುಂಬಬೇಕು : ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬ ಕ್ಕೆ 4 ರಿಂದ 5 ಸಾವಿರ ರೂ.ಗಳು ಸೇರುತ್ತಿದ್ದು, ವರ್ಷಕ್ಕೆ 48 ರಿಂದ 50 ಸಾವಿದ ರೂ.ಗಳು ಸೇರುತ್ತದೆ. ಇದು ಬಡಜನರಿಗೆ ಸೌಲಭ್ಯ ನೀಡುತ್ತದೆ. ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಾಗಿದ್ದು, ಬಡವರಿಗೆ ಕೊಂಡುಕೊಳ್ಳುವ ಶಕ್ತಿ ಯನ್ನು ಈ ಯೋಜನೆಗಳು ಹೆಚ್ಚಿಸುತ್ತವೆ ಎಂದರು