
ಶಿವಮೊಗ್ಗದಲ್ಲಿ ತರೀಕೆರೆ ವೃದ್ದೆಗೆ ನಕಲಿ ಬಂಗಾರದ ಸರ ನೀಡಿ ವಂಚಿಸಿದ್ದ ಶಿಕಾರಿಪುರದ ಆರೋಪಿ ಸೆರೆ!
ಶಿವಮೊಗ್ಗ, ಜ. 14: ವಯೋವೃದ್ದೆಯೋರ್ವರಿಗೆ ನಕಲಿ ಬಂಗಾರದ ಸರ ನೀಡಿ, ಅವರ ಬಳಿಯಿದ್ದ ಅಸಲಿ ಬಂಗಾರದ ಆಭರಣ ಪಡೆದು ವಂಚಿಸಿದ್ದ ಆರೋಪದ ಮೇರೆಗೆ, ಓರ್ವನನ್ನು ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದ ನಿವಾಸಿ ಕೃಷ್ಣಪ್ಪ (62) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 25 ಸಾವಿರ ರೂ. ಮೌಲ್ಯದ 05 ಗ್ರಾಂದ ತೂಕದ ಬಂಗಾರದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ಸ್’ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಶ್ರೀನಿವಾಸ್, ಸಿಬ್ಬಂದಿಗಳಾದ ಫಾಲಾಕ್ಷನಾಯ್ಕ್, ಲಚ್ಚಾನಾಯ್ಕ್, ಚಂದ್ರಾನಾಯ್ಕ್, ನಿತಿನ್, ಪುನೀತ್, ಚಂದ್ರಾನಾಯ್ಕ್ ಎಂ, ಮನೋಹರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಲಕ್ಷಮ್ಮ (70) ಎಂಬುವರು ಅಡಕೆ ಸುಲಿಯುವ ಕೆಲಸಕ್ಕೆಂದು ತೀರ್ಥಹಳ್ಳಿಗೆ ತೆರಳಲು ಶಿವಮೊಗ್ಗಕ್ಕೆ ಆಗಮಿಸಿ, ಅಲ್ಲಿಂದ ಖಾಸಗಿ ಬಸ್ ನಿಲ್ದಾಣದ ಕಡೆ ಹೋಗುತ್ತಿರುವಾಗ ಇಬ್ಬರು ಅಪರಿಚಿತರು ಇವರನ್ನು ನಿಲ್ಲಿಸಿ ಪರಿಚಯ ಮಾಡಿಕೊಂಡಿದ್ದರು.
‘ಮಗಳನ್ನು ಚಿಕಿತ್ಸೆಗೆ ದಾಖಲಿಸಿದ್ದು, ಆಪರೇಷನ್ ಮಾಡಲು ಹಣ ಬೇಕಾಗಿದೆ. ಈ ಕಾರಣದಿಂದ ತಮ್ಮ ಬಳಿಯಿರುವ ದುಬಾರಿ ಬೆಲೆಯ ಕಾಸಿನ ಸರ ಮಾರುತ್ತಿದ್ದೆವೆ’ ಎಂದು ಹೇಳಿದ್ದಾರೆ. ಆದರೆ ಲಕ್ಷಮ್ಮ ಅವರು ತಮ್ಮ ಬಳಿ ಹಣವಿಲ್ಲ ಎಂದು ತಿಳಿಸಿದ್ದಾರೆ.
‘ನಿಮ್ಮ ಬಳಿಯಿರುವ ಕಿವಿಯೊಲೆ, ಸರ ಕೊಡಿ. ಕಾಸಿನ ಸರವನ್ನು ಬೇರೆಡೆ ಮಾರಾಟ ಮಾಡಿ…’ ಎಂದು ವಂಚಕರು ನಂಬಿಸಿದ್ದರು. ಇವರ ಮಾತು ನಂಬಿದ ವೃದ್ದೆಯು, 3 ಗ್ರಾಂ ತೂಕದ ಕಿವಿಯೊಲೆ ಹಾಗೂ 2 ಗ್ರಾಂ ತೂಕದ ಸರವನ್ನು ನೀಡಿದ್ದರು. ನಂತರ ಕಾಸಿನ ಸರ ನಕಲಿಯಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.