
‘ಶಿವಮೊಗ್ಗ ಪಾಲಿಕೆ ವ್ಯಾಪ್ತಿ ವಿಸ್ತರಣೆ – ಪೊಲೀಸ್ ಕಮೀಷನರೇಟ್ ಸ್ಥಾಪನೆ ಕುರಿತಂತೆ ಚರ್ಚಿಸಿ ಕ್ರಮ’ : ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ, ಜ. 15: ‘ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಹಾಗೂ ಪೊಲೀಸ್ ಕಮೀಷನರೇಟ್ ಸ್ಥಾಪನೆ ಕುರಿತಂತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ 25 ವರ್ಷಗಳಿಂದ ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಪಾಲಿಕೆ ವ್ಯಾಪ್ತಿ ವಿಸ್ತರಣೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,
‘ಶಿವಮೊಗ್ಗ ನಗರದ ಹಲವೆಡೆ ಅಭಿವೃದ್ದಿ ಕುಂಠಿತವಾಗಿರುವುದು ಗಮನಕ್ಕೆ ಬಂದಿದೆ. ಕೆಲವೆಡೆ ದೊಡ್ಡ ದೊಡ್ಡ ಮನೆಗಳು ನಿರ್ಮಾಣವಾಗಿವೆ. ಆದರೆ ಮೂಲಸೌಕರ್ಯ ವ್ಯವಸ್ಥೆಗಳಲ್ಲಿ ಹೆಚ್ಚುಕಮ್ಮಿಯಿರುವುದು ಕಂಡುಬಂದಿದೆ. ಹಾಗೆಯೇ ರಸ್ತೆಗಳಂತ ಸೌಲಭ್ಯವೂ ಇಲ್ಲವಾಗಿದೆ’ ಎಂದರು.
ಶಿವಮೊಗ್ಗ ನಗರ ಬಹಳ ದೊಡ್ಡದಾಗಿ ಬೆಳೆದಿದೆ. ಜನಸಂಖ್ಯೆ ಹೆಚ್ಚಾಗಿದೆ. ನಗರ ವ್ಯಾಪ್ತಿ ವಿಸ್ತರಣೆಯ ಅಗತ್ಯವಿದೆ. ಈ ಕುರಿತಂತೆ ಚರ್ಚಿಸಲು ಪಾಲಿಕೆ ಆಯುಕ್ತರ ಜೊತೆ ಚರ್ಚೆ ನಡೆಸುತ್ತೆನೆ ಎಂದು ಹೇಳಿದರು.
ಕಾಲಮಿತಿಯೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮುಖಂಡರ ಸಲಹೆ, ಸೂಚನೆ ಪಡೆದು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಕಮೀಷನರೇಟ್ ಸ್ಥಾಪನೆ ಕುರಿತಂತೆಯೂ ಸಂಬಂಧಿಸಿದವರ ಜೊತೆ ಚರ್ಚಿಸಲಾಗುವುದು. ಆಡಳಿತ ವ್ಯವಸ್ಥೆಗೆ ಅನುಕೂಲಕರವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಮಧು ಬಂಗಾರಪ್ಪ ಅವರು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದ್ದಾರೆ.