
ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ..!
ಶಿವಮೊಗ್ಗ, ಜ. 17: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (ಸೂಡಾ) ವು ತನ್ನ ಕಚೇರಿ ಪಕ್ಕದ ಸಾರ್ವಜನಿಕ ರಸ್ತೆಯೊಂದಕ್ಕೆ ಕಬ್ಬಿಣದ ತಡೆ ಬೇಲಿ ಹಾಕಿ, ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಿರುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ!
‘ಕಚೇರಿಯ ಕಾರುಗಳ ನಿಲುಗಡೆಗೆ ತೊಂದರೆಯಾಗುತ್ತಿರುವ ಕಾರಣದಿಂದ ಸದರಿ ಸಾರ್ವಜನಿಕ ರಸ್ತೆ ಬಂದ್ ಮಾಡಲು ಮುಖ್ಯ ಕಾರಣವಾಗಿದೆ’ ಎಂದು ಸ್ಥಳೀಯ ಪತ್ರ ಬರಹಗಾರರ ಸಂಘದ ಮುಖಂಡ ಜಿ.ಎಂ.ಸುರೇಶ್ ಬಾಬು ಅವರು ದೂರಿದ್ದಾರೆ.
‘ಕಳೆದ ಹಲವು ದಶಕಗಳಿಂದ ಸದರಿ ರಸ್ತೆಯಿದೆ. ಇದೀಗ ಏಕಾಏಕಿ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿದ ಕ್ರಮ ಅಕ್ಷಮ್ಯ ಅಪರಾಧವಾಗಿದೆ. ಇದು ಜನ ವಿರೋಧಿಯಾದುದಾಗಿದೆ. ಸಕಾರಣವಿಲ್ಲದೆ ಜನ – ವಾಹನ ಸಂಚಾರವಿರುವ ರಸ್ತೆ ಬಂದ್ ಮಾಡಲು ಮುಂದಾಗಿರುವುದು ಏಕೆ? ಎಂಬುವುದು ಗೊತ್ತಾಗುತ್ತಿಲ್ಲ.
ಈ ಕುರಿತಂತೆ ಪ್ರಾಧಿಕಾರ ಆಡಳಿತ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕು. ತತ್’ಕ್ಷಣವೇ ಸಾರ್ವಜನಿಕ ರಸ್ತೆಗೆ ಹಾಕಿರುವ ಕಬ್ಬಿಣದ ತಡೆಗೋಡೆ ತೆಗೆಯಬೇಕು. ಸುಗಮ ಜನ – ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದು ಜಿ.ಎಂ.ಸುರೇಶ್ ಬಾಬು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಗಮನಕ್ಕಿದೆಯೇ…?
*** ಸದ್ಯ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ‍್ಯಕ್ಷರಾಗಿ ಜಿಲ್ಲಾಧಿಕಾರಿಗಳೇ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಕಚೇರಿ ಪಕ್ಕದ ಸಾರ್ವಜನಿಕ ರಸ್ತೆ ಬಂದ್ ಮಾಡುತ್ತಿರುವ ಪ್ರಾಧಿಕಾರದ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿಯೇ ಇದೆಯೇ? ಇಲ್ಲವೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.