
ಇನ್ನೋವಾ ಕಾರಿನಲ್ಲಿ ಒಣ ಗಾಂಜಾ, ಮಚ್ಚು, ಬರ್ಚಿ, ಡ್ರ್ಯಾಗರ್ ಕೊಂಡೊಯ್ಯುತ್ತಿದ್ದವ ಪೊಲೀಸ್ ಬಲೆಗೆ!
ಶಿವಮೊಗ್ಗ, ಜ. 18: ಇನ್ನೋವಾ ಕಾರಿನಲ್ಲಿ (Innova car) ಗಾಂಜಾ ಹಾಗೂ ಮಾರಕಾಸ್ತ್ರಗಳನ್ನು ಕೊಂಡೊಯ್ಯುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಓರ್ವನನ್ನು ಬಂಧಿಸಿದ ಘಟನೆ ಶಿವಮೊಗ್ಗ (shimoga) ನಗರದ ಹಳೇ ಮಂಡ್ಲಿ ಪಂಪ್ ಹೌಸ್ ಸಮೀಪ ಜ. 17 ರಂದು ನಡೆದಿದೆ.
ಶಿವಮೊಗ್ಗದ ಮಾರ್ನಾಮಿಬೈಲ್ ಬಡಾವಣೆ ನಿವಾಸಿ ಹರ್ಬಾಜ್ ಯಾನೆ ಹಜರತ್ ಯಾನೆ ಅರ್ಬಾಜ್ ಖಾನ್ (23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ 440 ಗ್ರಾಂ ತೂಕದ 23 ಸಾವಿರ ರೂ. ಮೌಲ್ಯದ ಒಣ ಗಾಂಜಾ, ಮಚ್ಚು, ಬರ್ಚಿ, ಡ್ರ್ಯಾಗರ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ (doddapete police station) ಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೋವಾ ಕಾರೊಂದರಲ್ಲಿ ಗಾಜನೂರು ಕಡೆಯಿಂದ ಶಿವಮೊಗ್ಗಕ್ಕೆ ಗಾಂಜಾ ಸಾಗಾಣೆ ಮಾಡಲಾಗುತ್ತಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಪೊಲೀಸರು (police) ಹಳೇ ಮಂಡ್ಲಿ ಪಂಪ್ ಹೌಸ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಸಿಲ್ವರ್ ಬಣ್ಣದ ಇನ್ನೋವಾ ಕಾರಿನ ತಪಾಸಣೆ ವೇಳೆ ಡಿಕ್ಕಿಯಲ್ಲಿ ಗಾಂಜಾ (ganza) , ಸೀಟ್ ನ ಕವರ್ ಕೆಳಭಾಗದಲ್ಲಿ ಮಾರಕಾಸ್ತ್ರಗಳಿರುವುದು ಪತ್ತೆಯಾಗಿದೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಎ.ಜಿ.ಕಾರಿಯಪ್ಪ, ಡಿವೈಎಸ್ಪಿ ಬಾಲರಾಜ್ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಠಾಣೆ ಇನ್ಸ್’ಪೆಕ್ಟರ್ ರವಿ ಪಾಟೀಲ್, ಸಬ್ ಇನ್ಸ್’ಪೆಕ್ಟರ್ ವಸಂತ್ ಮತ್ತವರ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.