
ಕಚೇರಿ ಕಾರುಗಳ ನಿಲುಗಡೆಗಾಗಿ ರಸ್ತೆಯಲ್ಲಿಯೇ ಲಕ್ಷಾಂತರ ರೂ. ವೆಚ್ಚದಲ್ಲಿ ಪಾರ್ಕಿಂಗ್ ಶೆಡ್ ನಿರ್ಮಾಣ!
*ಚರ್ಚೆಗೆ ಗ್ರಾಸವಾದ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಕ್ರಮ
ಮಹಾನಗರ ಪಾಲಿಕೆ ಆಡಳಿತದಿಂದ ಡಾಂಬರೀಕರಣಗೊಂಡಿದ್ದ ರಸ್ತೆ!!
ಶಿವಮೊಗ್ಗ, ಜ. 21: ಕಚೇರಿ ಕಾರುಗಳ ನಿಲುಗಡೆ ಮಾಡುವುದಕ್ಕಾಗಿ, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (SBUDA) ವು ವಿನೋಬನಗರ (vinobanagara) ಪೊಲೀಸ್ ಚೌಕಿ ಸಮೀಪದ ತನ್ನ ಕಚೇರಿ ಎದುರಿನ ಸಾರ್ವಜನಿಕ ರಸ್ತೆ ಬಂದ್ ಮಾಡಿ, ಲಕ್ಷಾಂತರ ರೂ. ವೆಚ್ಚದಲ್ಲಿ ಪಾರ್ಕಿಂಗ್ (parking) ಶೆಡ್ ನಿರ್ಮಾಣ ಮಾಡಿದೆ..!
ಇತ್ತೀಚೆಗೆ ದಿಢೀರ್ ಆಗಿ ಪ್ರಾಧಿಕಾರವು ರಸ್ತೆಯ ಒಂದು ಬದಿ ಕಬ್ಬಿಣದ ತಡೆ ಬೇಲಿ ಹಾಕಿತ್ತು. ಈ ಕುರಿತಂತೆ ಸಾರ್ವಜನಿಕರಿಗೆ ಯಾವುದೇ ಮಾಹಿತಿಯಿರಲಿಲ್ಲ. ಇದಾದ ನಂತರ ಕಬ್ಬಿಣದ ಶೆಡ್ ನಿರ್ಮಿಸಿ, ಸುಸಜ್ಜಿತವಾದ ಪಾರ್ಕಿಂಗ್ ತಾಣ ಅಭಿವೃದ್ದಿಪಡಿಸಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಪ್ರಾಧಿಕಾರದ ಕಚೇರಿ ನಿರ್ಮಾಣವಾದಗಿನಿಂದಲೂ ರಸ್ತೆಯಿದೆ. ಪಾಲಿಕೆ ಆಡಳಿತವು ಸದರಿ ರಸ್ತೆಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಿದೆ. ಜನ – ವಾಹನ ಸಂಚಾರವಿದೆ. ಆದರೆ ಏಕಾಏಕಿ ಪ್ರಾಧಿಕಾರ ಆಡಳಿತವು ರಸ್ತೆಯ ಜಾಗ ತನ್ನದೆಂದು ಹೇಳಿ, ಕಚೇರಿ ಕಾರುಗಳ ನಿಲುಗಡೆಗೆ ಪಾರ್ಕಿಂಗ್ ಶೆಡ್ ನಿರ್ಮಾಣ ಮಾಡಿರುವುದು ಎಷ್ಟು ಸರಿ ಎಂದು ನಾಗರೀಕರು ಪ್ರಶ್ನಿಸುತ್ತಿದ್ದಾರೆ.
‘ಯೋಜನಾ ಬದ್ಧ ನಗರ ನಿರ್ಮಾಣ, ಸಾರ್ವಜನಿಕ ಜಾಗ ಸಂರಕ್ಷಣೆಗೆ ಗುರುತರ ಕಾರ್ಯನಿರ್ವಹಣೆ ಮಾಡುತ್ತಿರುವ ನಗರಾಭಿವೃದ್ದಿ ಪ್ರಾಧಿಕಾರವೇ ಇದೀಗ ಸಾರ್ವಜನಿಕ ರಸ್ತೆಯಲ್ಲಿ ಪಾರ್ಕಿಂಗ್ ತಾಣ ನಿರ್ಮಾಣ ಮಾಡಿರುವುದು ನಿಜಕ್ಕೂ ಸಖೇದಾಶ್ಚರ್ಯ ಸಂಗತಿಯಾಗಹಿದೆ. ಬೇಲಿಯೇ ಎದ್ದು ಹೊಲ ಮೇಯ್ದದಂತ ಸ್ಥಿತಿಯಾಗಿದೆ. ನಾಗರೀಕರ ತೆರಿಗೆ ಹಣದ ದುರ್ಬಳಕೆಯಾಗಿದೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ’ ಎಂದು ನಾಗರೀಕರು ದೂರುತ್ತಾರೆ.
ಪ್ರಸ್ತುತ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರೇ ಅಧ್ಯಕ್ಷರಾಗಿದ್ದಾರೆ. ಸಾರ್ವಜನಿಕ ರಸ್ತೆ ಬಂದ್ ಮಾಡಿ ಪಾರ್ಕಿಂಗ್ ಸ್ಥಳವಾಗಿ ಪರಿವರ್ತನೆ ಮಾಡಿರುವುದು ಅವರ ಗಮನಕ್ಕಿದೆಯೇ? ಅಥವಾ ಅವರ ಸಮ್ಮತಿಯೊಂದಿಗೆ ಪ್ರಾಧಿಕಾರದ ಅಧಿಕಾರಿಗಳು ಪಾರ್ಕಿಂಗ್ ತಾಣ ನಿರ್ಮಿಸಿದ್ದಾರೆಯೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.