
ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ : ಸಮಗ್ರ ಪರಿಶೀಲನೆಗೆ ಮುಂದಾದ ಪೊಲೀಸ್ ಇಲಾಖೆ
ಶಿವಮೊಗ್ಗ, ಜ. 22: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ನಗರದ ಶಿವಪ್ಪನಾಯಕ ವೃತ್ತದಲ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಸಿಹಿ ವಿತರಣೆ ಸಮಾರಂಭದ ವೇಳೆ, ಗೊಂದಲ ಸೃಷ್ಟಿಗೆ ಕಾರಣವಾದ ಮಹಿಳೆಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ : ದ್ವಿ ಚಕ್ರ ವಾಹನದಲ್ಲಿ ಮೂರು ವರ್ಷದ ಪುತ್ರನೊಂದಿಗೆ ಆಗಮಿಸಿದ್ದ ಅನ್ಯ ಧರ್ಮೀಯ ಮಹಿಳೆಯು, ಬಿಜೆಪಿ ನಾಯಕರು ಭಾಷಣ ಮಾಡುತ್ತಿದ್ದುದನ್ನು ದ್ವಿ ಚಕ್ರ ವಾಹನದಲ್ಲಿಯೇ ಕುಳಿತು ಮೊಬೈಲ್ ಪೋನ್ ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು. ಇದನ್ನು ಸ್ಥಳದಲ್ಲಿದ್ದ ಬಿಜೆಪಿಯ ಕೆಲ ಕಾರ್ಯಕರ್ತರು, ಪೊಲೀಸರು, ಪತ್ರಕರ್ತರು ಗಮನಿಸುತ್ತಿದ್ದರು.
ಹಲವು ನಿಮಿಷಗಳ ನಂತರ ಮಹಿಳೆಯನ್ನು ಸ್ಥಳದಿಂದ ಕಳುಹಿಸಲು ಪೊಲೀಸರು ಮುಂದಾದರು. ಈ ವೇಳೆ ಮಹಿಳೆಯು ಆಕ್ರೋಶಗೊಂಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ಮಾತನಾಡಲಾರಂಭಿಸಿದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಕಾರ್ಯಕರ್ತರು ಜೈ ಶ್ರೀರಾಂ ಘೋಷಣೆ ಕೂಗಿದರು. ಮಹಿಳೆಯು ಅಲ್ಲಾ ಹೋ ಅಕ್ಬರ್ ಘೋಷಣೆ ಕೂಗಲಾರಂಭಿಸಿದರು.
ಸ್ಥಳದಲ್ಲಿ ಮಹಿಳಾ ಪೊಲೀಸರಿಲ್ಲದಿದ್ದ ಕಾರಣದಿಂದ, ಸದರಿ ಮಹಿಳೆಯನ್ನು ಪೊಲೀಸ್ ಜೀಪ್ ಗೆ ಹತ್ತಿಸಲು ಹರಸಾಹಸ ಪಡುವಂತಾಯಿತು. ಇದೇ ವೇಳೆ ಸ್ಥಳದಲ್ಲಿದ್ದ ಕೆಲ ಬಿಜೆಪಿ ನಾಯಕರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಅಂತಿಮವಾಗಿ ಪೊಲೀಸ್ ವಾಹನದಲ್ಲಿ ಮಹಿಳೆಯನ್ನು ಕರೆದೊಯ್ಯಲಾಯಿತು.
ಸಮಗ್ರ ಪರಿಶೀಲನೆ : ಸದರಿ ಮಹಿಳೆ ವಿವಾಹಿತೆಯಾಗಿದ್ದು, ಕಳೆದ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯ ಸಮಸ್ಯೆಯಿಂದ ಬಳಲುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಪ್ರಕರಣದ ಕುರಿತಂತೆ ಪೊಲೀಸ್ ಇಲಾಖೆಯು ಸಮಗ್ರ ಪರಿಶೀಲನೆಗೆ ಮುಂದಾಗಿದೆ.
‘ಕಳೆದ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆ’
‘ಸದರಿ ಮಹಿಳೆಯು ಕೆಲ ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಚಿಕಿತ್ಸೆಯಲ್ಲಿದ್ದಾರೆ ಎಂದು ಮಹಿಳೆಯ ತಂದೆಯು ಮಾಹಿತಿ ನೀಡಿದ್ದಾರೆ. ಮಹಿಳೆಯ ಬಳಿ ಕೆಲ ಮಾತ್ರೆಗಳು ದೊರಕಿವೆ. ಚಿಕಿತ್ಸೆಯ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೊತೆಗೆ ಮಹಿಳೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಶಿವಮೊಗ್ಗದ ಖಾಸಗಿ ಮಾನಸಿಕ ಆಸ್ಪತ್ರೆಯೊಂದರ ವಿವರ ಕೂಡ ಪೊಲೀಸ್ ಇಲಾಖೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.
ಈ ನಡುವೆ ಮಹಿಳೆಯ ತಂದೆ ಸುದ್ದಿಗಾರರೊಂದಿಗೆ ಮಾತನಾಡಿ, ‘ತಮ್ಮ ಪುತ್ರಿ ಕಳೆದ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಂದು ಬೆಳಿಗ್ಗೆ ಸ್ಕೂಟಿಯಲ್ಲಿ ಮನೆಯಿಂದ ತೆರಳಿದ್ದಳು. ಪುತ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದ ವಿವರವನ್ನು ಪೊಲೀಸರಿಗೆ ನೀಡಿದ್ದೆನೆ’ ಎಂದು ಮಾಹಿತಿ ನೀಡಿದ್ದಾರೆ.