'If there was no constitution KS Eshwarappa CT Ravi R Ashok would have had to work in the fields without becoming MLAs': CM Siddaramaiah ‘ಸಂವಿಧಾನ ಇಲ್ಲದಿದ್ದರೆ ಕೆ.ಎಸ್.ಈಶ್ವರಪ್ಪ ಸಿ.ಟಿ.ರವಿ ಆರ್.ಅಶೋಕ್ ಶಾಸಕರಾಗದೆ ಹೊಲ ಗದ್ದೆಗಳಲ್ಲಿ ಕೂಲಿ ಮಾಡಬೇಕಾಗಿತ್ತು’ : ಸಿಎಂ ಸಿದ್ದರಾಮಯ್ಯ

‘ಸಂವಿಧಾನ ಇಲ್ಲದಿದ್ದರೆ ಕೆ.ಎಸ್.ಈಶ್ವರಪ್ಪ ಸಿ.ಟಿ.ರವಿ, ಆರ್.ಅಶೋಕ್ ಶಾಸಕರಾಗದೆ ಹೊಲ ಗದ್ದೆಗಳಲ್ಲಿ ಕೂಲಿ ಮಾಡಬೇಕಾಗಿತ್ತು’: ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ, ಜ. 28: ಜಾತಿ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವ ಸಂವಿಧಾನ ವಿರೋಧಿ BJP-RSS ಅನ್ನು ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. 

ಕರ್ನಾಟಕ ಶೋಷಿತ ಜಾತಿ-ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಚಿತ್ರದುರ್ಗದಲ್ಲಿ ಆಯೋಜಿಸಿದ್ದ “ಶೋಷಿತರ ಜಾಗೃತಿ ಸಮಾವೇಶವನ್ನು” ಉದ್ಘಾಟಿಸಿ ಮಾತನಾಡಿದರು. 

ಹಿಂದುಳಿದ, ದಲಿತ ಮತ್ತು ಶೋಷಿತ ಜಾತಿ ಸಮುದಾಯಗಳ ಜನ ತಮ್ಮ ಶತ್ರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಶತ್ರುಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಿಮ್ಮ ಸ್ವಾಭಿಮಾನ ಬೆಳೆಸಿಕೊಳ್ಳಿ ಎಂದು ಸೂಚಿಸಿದರು. 

ಮಂಡಲ್ ವರದಿಯನ್ನು ಬಿಜೆಪಿ ಮತ್ತು RSS ವಿರೋಧಿಸುತ್ತಲೇ ಬಂದಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು BJP-RSS ನಿರಂತರವಾಗಿ ವಿರೋಧಿಸುತ್ತಲೇ ಇದೆ. ಆದ್ದರಿಂದ ಸಂವಿಧಾನ ಮತ್ತು ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳ ಕೈಗೆ ಅಧಿಕಾರ ಹೋಗಬಾರದು ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಈ ಎಚ್ಚರಿಕೆಯನ್ನು ನಾವು ಮರೆಯಬಾರದು ಎಂದರು. 

ಬಾಬಾ ಸಾಹೇಬ್ ಅವರ ಸಂವಿಧಾನ ಇಲ್ಲದೇ ಹೋಗಿದ್ದರೆ ಕೆ.ಎಸ್.ಈಶ್ವರಪ್ಪ ಸಿ.ಟಿ.ರವಿ ಮತ್ತು ಆರ್.ಅಶೋಕ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಲು ಸಾಧ್ಯವೇ ಇರಲಿಲ್ಲ. ಯಾರದ್ದೋ ಹೊಲ ಗದ್ದೆಗಳಲ್ಲಿ ಕೂಲಿ ಮಾಡುತ್ತಾ ಕೂರಬೇಕಾಗಿತ್ತು ಎಂದು ಮುಖ್ಯಮಂತ್ರಿಗಳು ಟೀಕಿಸಿದರು. 

ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿಬಿಟ್ಟೆ ಎನ್ನುವ ಕಾರಣಕ್ಕೆ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಮಧ್ಯಮ ವರ್ಗ ಮತ್ತು ಬಡವರಿಗೆ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತಂದಿದ್ದಕ್ಕೆ ನನ್ನನ್ನು ವಿರೋಧಿಸುತ್ತಿದ್ದಾರೆ. 

ಅನ್ನ ಭಾಗ್ಯ, ಶೂ ಭಾಗ್ಯ, ಸಮವಸ್ತ್ರ ಭಾಗ್ಯ ಸೇರಿ ಸಾಲು ಸಾಲು ಅನುಕೂಲಗಳನ್ನು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ಕಲ್ಪಿಸಿದೆ. ಇದಕ್ಕೇ ನನ್ನನ್ನು ವಿರೋಧಿಸುತ್ತಾರೆ. ಆದರೆ ನಾನು ಎದೆ ಗುಂದದೆ ನಿಮ್ಮ ಪರವಾಗಿ ಇರುತ್ತೇನೆ ಎಂದರು. 

ಜಾತಿ ತಾರತಮ್ಯ, ಜಾತಿ ಶೋಷಣೆ, ಜಾತಿ ಆಧಾರಿತ ಅಸಮಾನತೆ ಜಾರಿಯಲ್ಲಿ ಇರುವವರೆಗೆ ಇಂಥಾ ಸಮಾವೇಶಗಳು ಅಗತ್ಯ ಮತ್ತು ಅನಿವಾರ್ಯ ಎಂದು ವಿವರಿಸಿದರು. 

ಸಂಘಟನೆಗಳ ಮೂಲಕ ಜಗೃತಿ ಪಡೆದುಕೊಂಡರೆ ಮಾತ್ರ ಜಾತಿ ವ್ಯವಸ್ಥೆ ನಾಶವಾಗುತ್ತದೆ ಎನ್ನುವ ಎಚ್ಚರವನ್ನು ಅಂಬೇಡ್ಕರ್ ಮುಂತಾದ ಮಹನೀಯರು ನೀಡಿದ್ದಾರೆ. ಕುಲ ಕುಲ ಎಂದು ಬಡಿದಾಡದಿರಿ ಎಂದು ಕರೆ ನೀಡಿದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಅವಮಾನಿಸಬೇಡಿ ಎಂದರು.  

ಜಾತಿ ವ್ಯವಸ್ಥೆ ಕಾರಣಕ್ಕೆ ಶತ ಶತಮಾನಗಳಿಂದ ತಳ ಸಮುದಾಯಗಳ ಜನ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಪರಿಣಾಮ ಸಮಾಜದಲ್ಲಿ ಅಸಮಾನತೆ ಸೃಷ್ಟಿ ಆಯಿತು‌. ಸಾಮಾಜಿಕ, ಆರ್ಥಿಕ ಅಸಮಾನತೆಗೆ ಜಾತಿ ವ್ಯವಸ್ಥೆಯೇ ಕಾರಣ. ಈ ಜಾತಿ ತಾರತಮ್ಯದಿಂದಲೇ ದೇಶದಲ್ಲು ಶೋಷಣೆ ಮುಂದುವರೆದಿದೆ. 

ಈ ಜಾತಿ ಶೋಷಣೆಗೆ ಕೊನೆ ಹಾಡುವ ಉದ್ದೇಶದಿಂದಲೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿದರು. ಸಾಹಿ ಮಹಾರಾಜ್, ಜ್ಯೋತಿಬಾ ಫುಲೆ, ಬುದ್ದ, ಬಸವಣ್ಣ, ನಾರಾಯಣಗುರು, ನಾಲ್ವಡಿ ಅರಸರು, ವಿವೇಕಾನಂದ, ಕನಕದಾಸರೆಲ್ಲರೂ ಈ ಜಾತಿ ವ್ಯವಸ್ಥೆ

ತೊಡೆದು ಹಾಕಲು ಶ್ರಮಿಸಿದರು. ನಮ್ಮ ಸಂವಿಧಾನ ಕೂಡ ಈ ಎಲ್ಲಾ ಮಹನೀಯರ ಆಶಯಗಳನ್ನು ಒಳಗೊಂಡಿದೆ ಎಂದರು. 

ಈ ಕಾರಣಕ್ಕೇ ಪಟ್ಟ ಭದ್ರ ಹೊತಾಸಕ್ತಿಗಳು, ದುಷ್ಟ ಶಕ್ತಿಗಳು ಸಂವಿಧಾನ ಬದಲಾಯಿಸುವ ಮೂಲಕ ಮತ್ತೆ ಶೋಷಣೆ, ಮೌಡ್ಯದ ದರ್ಬಾರ್ ಮುಂದುವರೆಸಲು ಯತ್ನಿಸುತ್ತಿದ್ದಾರೆ. ಒಂದು ಕಡೆ ಸಂವಿಧಾನ ಬದಲಾಯಿಸಲು ಹುನ್ನಾರ ನಡೆಸುತ್ತಿದ್ದಾರೆ ಮತ್ತೊಂದು ಕಡೆ ನಾಲ್ವಡಿ ಅರಸು ಮತ್ತು ಅಂಬೇಡ್ಕರ್, ಸಾಹು ಮಹಾರಾಜ್ ಪ್ರತಿಪಾದಿಸಿದ ಮೀಸಲಾತಿಯನ್ನೂ ವಿರೋಧಿಸುತ್ತಿದ್ದಾರೆ. ಆದ್ದರಿಂದ ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು. 

*ಕಾಂತರಾಜ್ ಅವರ ವರದಿಯನ್ನು ಕೆಲವರು ಓದದೆ, ತಿಳಿಯದೆ ವಿರೋಧಿಸುತ್ತಿದ್ದಾರೆ. ನಾವು ಕಾಂತರಾಜ ವರದಿಯನ್ನು ಖಂಡಿತಾ ಸ್ವೀಕರಿಸುತ್ತೇವೆ* 

*ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡಿ ದೇಶದಲ್ಲಿ ಜಾತಿ ಗಣತಿ ಮಾಡಿಸುತ್ತೇವೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ* 

ಸಮಾವೇಶದಲ್ಲಿ ಶೋಷಿತ ಸಮುದಾಯಗಳ ಹಕ್ಕೊತ್ತಾಯಗಳ ಬೇಡಿಕೆಗಳನ್ನು ಒಕ್ಕೂಟದ ಪದಾಧಿಕಾರಿಗಳು ಮಂಡಿಸಿದರು.‌

ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಬೋಸ್ ರಾಜು, ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ಜಮೀರ್ ಅಹಮದ್ , ದಿನೇಶ್ ಗುಂಡೂರಾವ್, ಆರ್. ಬಿ.ತಿಮ್ಮಾಪುರ್, ನಾಗೇಂದ್ರ, ಡಿ.ಸುಧಾಕರ್,  ಶಿವರಾಜ್ ತಂಗಡಗಿ, ರಹೀಂಖಾನ್ ಮುಂತಾದವರು ಮಾತನಾಡಿ ದೇಶದಲ್ಲಿ ಶೋಷಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆ ತಕ್ಕ ಪಾಠ ಕಲಿಸುವಂತೆ ಕರೆ ನೀಡಿದರು. 

ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಪ್ಪ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಾವಳ್ಳಿ ಶಂಕರ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಎಚ್.ಆಂಜನೇಯ, ಮಾಜಿ ಸಂಸದ ಉಗ್ರಪ್ಪ ಹಾಗೂ ಶಾಸಕರುಗಳಾದ ಪ್ರಕಾಶ್ ರಾಥೋಡ್, ನಾಗರಾಜ್ ಯಾದವ್, ಅಜಯ್ ಸಿಂಗ್, ನಸೀರ್ ಅಹಮದ್ ಸೇರಿ 20 ಕ್ಕೂ ಹೆಚ್ಚು ಶಾಸಕರುಗಳು ಉಪಸ್ಥಿತರಿದ್ದು ಮಾತನಾಡಿದರು.

'The salvation of the country is possible with value-based politics': Former Speaker DH Shankaramurthy's opinion ಮೌಲ್ಯಾಧಾರಿತ ರಾಜಕಾರಣದಿಂದ ದೇಶದ ಉದ್ಧಾರ ಸಾಧ್ಯ : ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಭಿಪ್ರಾಯ Previous post ‘ಮೌಲ್ಯಾಧಾರಿತ ರಾಜಕಾರಣದಿಂದ ದೇಶದ ಉದ್ಧಾರ ಸಾಧ್ಯ’ : ಮಾಜಿ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅಭಿಪ್ರಾಯ
Andar-Bahar Ispeet Gambling at Shimoga Temporary Employees Association Recreation Club :18 people arrested ಶಿವಮೊಗ್ಗದ ಹಂಗಾಮಿ ನೌಕರರ ಸಂಘದ ರಿಕ್ರಿಯೇಷನ್ ಕ್ಲಬ್ ನಲ್ಲಿ ಅಂದರ್ - ಬಾಹರ್ ಇಸ್ಪೀಟ್ ಜೂಜು : 18 ಜನರ ಬಂಧನ Next post ಶಿವಮೊಗ್ಗದ ಹಂಗಾಮಿ ನೌಕರರ ಸಂಘದ ರಿಕ್ರಿಯೇಷನ್ ಕ್ಲಬ್ ನಲ್ಲಿ ಅಂದರ್  – ಬಾಹರ್ ಇಸ್ಪೀಟ್ ಜೂಜು : 18 ಜನರ ಬಂಧನ