ಬಜೆಟ್ : ಈಡೇರದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಬೇಡಿಕೆಗಳು!

ಶಿವಮೊಗ್ಗ, ಸೆ. 17: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ #ಬಜೆಟ್ ನಲ್ಲಿ, #ಶಿವಮೊಗ್ಗ ಜಿಲ್ಲೆಯ ಪ್ರಮುಖ ಆಡಳಿತಾತ್ಮಕ ಬೇಡಿಕೆಗಳಿಗೆ ಮನ್ನಣೆ ದೊರಕಿಲ್ಲವಾಗಿದೆ!
ಈ ಮೊದಲೇ ಘೋಷಣೆಯಾಗಿದ್ದ ಕೆಲ ಯೋಜನೆಗಳನ್ನು ಬಜೆಟ್ ನಲ್ಲಿ ಮತ್ತೆ ಪ್ರಸ್ತಾಪಿಸಲಾಗಿದೆ. ಉಳಿದಂತೆ ಜಿಲ್ಲೆಯ ಹಲವು ಮಹತ್ವದ ಆಡಳಿತಾತ್ಮಕ, ಜನೋಪಯೋಗಿ ಯೋಜನೆಗಳಿಗೆ ಬಜೆಟ್ ನಲ್ಲಿ ಒತ್ತು ಸಿಕ್ಕಿಲ್ಲವಾಗಿದೆ.
ಬಜೆಟ್ ನಲ್ಲಿ ಜಿಲ್ಲೆಗೆ ಸಿಕ್ಕಿದ್ದು: 18 ಕೋಟಿ ರೂ. ವೆಚ್ಚದಲ್ಲಿ #ನಾರಾಯಣಗುರು ವಸತಿ ಶಾಲೆ ಆರಂಭ, ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
#ಸಾಗರ ತಾಲೂಕಿನ ಕಾರ್ಗಲ್-ಭಟ್ಕಳ ಮಾರ್ಗದಲ್ಲಿನ ಶರಾವತಿ ಹಿನ್ನೀರು ಪ್ರದೇಶವಾದ, ಕೋಗಾರು-ಶಿಗ್ಲು ವಿನಲ್ಲಿ ಸಾರ್ವಜನಿಕ – ಖಾಸಗಿ ಸಹಭಾಗಿತ್ವದಲ್ಲಿ ಲೈಟ್ ಕಾರ್ಗೋ ಟ್ರಾನ್ಸ್’ಪೋರ್ಟ್ ಬೋಟ್ ಸೇವೆ ಆರಂಭಿಸುವುದಾಗಿ ಬಜೆಟ್ ನಲ್ಲಿ ಹೇಳಲಾಗಿದೆ. ಸಾಗರದಲ್ಲಿ ವಾಹನ ಚಾಲಕರ ತರಬೇತಿಗಾಗಿ ಸ್ವಯಂ ಚಾಲಿತ ಚಾಲನಾ ಪಥದ ನಿರ್ಮಾಣದ ಪ್ರಸ್ತಾಪ ಮಾಡಲಾಗಿದೆ. ಉಳಿದಂತೆ ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗಕ್ಕೆ ರಾಜ್ಯದ ಪಾಲು ಈ ಮೊದಲು ಹಂಚಿಕೆಯಾಗಿದ್ದು, ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಈ ಮೊದಲೇ ಘೋಷಣೆಯಾಗಿದ್ದ ಶಿವಮೊಗ್ಗದ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆಗೆ ಅನುದಾನ ಮೀಸಲಿರಿಸಲಾಗಿದೆ.
ಬಜೆಟ್ ನಲ್ಲಿ ಸಿಗದ ಒತ್ತು: #ಭದ್ರಾವತಿ ಯಲ್ಲಿ #ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪನೆ, ಶಿವಮೊಗ್ಗ-ಭದ್ರಾವತಿ ಪೊಲೀಸ್ ಕಮೀಷನರೇಟ್ ಸ್ಥಾಪನೆ, ಶಿವಮೊಗ್ಗ ಗ್ರಾಮಾಂತರ-ಹೊಳೆಹೊನ್ನೂರು-ಶಿರಾಳಕೊಪ್ಪ-ಆನವಟ್ಟಿ ತಾಲೂಕು ಕೇಂದ್ರಗಳ ರಚನೆ, ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ,
ದಕ್ಷಿಣ ಭಾರತದ ಮೊಟ್ಟಮೊದಲ ಆಯುಷ್ ವಿವಿ ಕಾರ್ಯಾರಂಭಕ್ಕೆ ಕ್ರಮ, ಪ್ರತ್ಯೇಕ ವಿದ್ಯುತ್ ವಲಯ ಸ್ಥಾಪನೆ, ರಾಜ್ಯದಲ್ಲಿಯೇ ಮಾದರಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅನುದಾನ, ಶಿವಮೊಗ್ಗ ಮಹಾನಗರ ಪಾಲಿಕೆ ಪುನರ್ವಿಂಗಡಣೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳಿಗೆ ಪ್ರಸ್ತುತ ಬಜೆಟ್ ನಲ್ಲಿ ಒತ್ತು ದೊರಕಿಲ್ಲವಾಗಿದೆ.

Previous post ಶಿವಗಂಗಾ ಯೋಗ ಕೇಂದ್ರದಲ್ಲಿ ಧ್ಯಾನಯೋಗಿ ಶಿವನ ಮೂರ್ತಿ ಹಾಗೂ ಮಾನಸ ಮೌನ ಪಿರಮಿಡ್ ಧ್ಯಾನ ಮಂದಿರ ಲೋಕಾರ್ಪಣೆ
Next post ರಾಜ್ಯದ ಗಮನ ಸೆಳೆದ ಶಿವಮೊಗ್ಗ NSUI : ಅತ್ಯುತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ