
ಶಿವಮೊಗ್ಗ – ಇನ್ನಷ್ಟು ಬಲಿಗಾಗಿ ಕಾದಿರುವ ‘ಕಳಪೆ ಕಾಮಗಾರಿಗಳು’ : ಎಚ್ಚೆತ್ತುಕೊಳ್ಳುವುದೆ ಆಡಳಿತ?!
ಬಡ ಕುಟುಂಬಕ್ಕೆ ಪರಿಹಾರ ಘೋಷಿಸಲು ಯುವ ಮುಖಂಡ ಎಸ್.ತಂಗರಾಜ್ ಆಗ್ರಹ
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜ. 30: ಪಾರ್ಕ್ ವೊಂದರಲ್ಲಿ ಸಿಮೆಂಟ್ ಕಲಾಕೃತಿ ಮುರಿದು ಆಟವಾಡುತ್ತಿದ್ದ 5 ವರ್ಷದ ಬಾಲಕಿ ಸಮೀಕ್ಷ ಹಾಗೂ ರಸ್ತೆಯೊಂದರ ಪಕ್ಕದ ಚರಂಡಿ ಸ್ಲ್ಯಾಬ್ ಕುಸಿದು ಮುತ್ತಪ್ಪ ಎಂಬ ಬಡ ಕುಟುಂಬದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆಗಳ ನಂತರ, ಕಳಪೆ ಕಾಮಗಾರಿಗಳ ಕುರಿತಂತೆ ನಾಗರೀಕ ವಲಯದಲ್ಲಿ ಆಕ್ರೋಶ ಭುಗಿಲೇಳಲಾರಂಭಿಸಿದೆ.
ಕಳಪೆ ಕಾಮಗಾರಿಗಳಿಗೆ ಇನ್ನೆಷ್ಟು ಅಮಾಯಕರು ಬಲಿಗಾಯಬೇಕು ಎಂದು ಜನಸಾಮಾನ್ಯರು ಆಡಳಿತಗಾರರನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಹಾಗೆಯೇ, ಹಲವೆಡೆ ಮಾಡಲಾಗಿರುವ ಕಳಪೆ ಕಾಮಗಾರಿಗಳು ಜೀವ ಬಲಿಗಾಗಿ ಕಾದು ಕುಳಿತಿರುವ ಮಾಹಿತಿಯನ್ನು ನಾಗರೀಕರು ಹೊರ ಹಾಕಲಾರಂಭಿಸಿದ್ದಾರೆ.
‘ಸೋಮವಾರ ವೀರಣ್ಣ ಲೇಔಟ್ ಬಳಿ ಚರಂಡಿ ಸ್ಲ್ಯಾಬ್ ಕುಸಿದು ಮುತ್ತಪ್ಪ ಮೃತಪಟ್ಟ ಸ್ಥಳದ ಬಳಿಯೇ, ಚರಂಡಿ ಸ್ಲ್ಯಾಬ್ ಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಕುಸಿದು ಬೀಳುತ್ತಿವೆ. ಸಂಬಂಧಿಸಿದ ಇಲಾಖೆಯವರು ಎಚ್ಚೆತ್ತು ದುರಸ್ತಿಗೆ ಕ್ರಮಕೈಗೊಳ್ಳದಿದ್ದರೆ ಮತ್ತಷ್ಟು ಅಮಾಯಕ ನಾಗರೀಕರು ಸಾವು – ನೋವಿಗೆ ತುತ್ತಾಗಬೇಕಾದ ಸಾಧ್ಯತೆಯಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ಯುವ ಮುಖಂಡ ಎಸ್. ತಂಗರಾಜ್ ದೂರಿದ್ದಾರೆ.
‘ಸದರಿ ರಸ್ತೆ ಪಕ್ಕದಲ್ಲಿ ರೈಲ್ವೆ ಇಲಾಖೆ ಹಾಗೂ ಪಾಲಿಕೆ ಆಡಳಿತದಿಂದ ಚರಂಡಿ ನಿರ್ಮಿಸಲಾಗಿದೆ. ಮೇಲ್ಭಾಗದಲ್ಲಿ ಸ್ಲ್ಯಾಬ್ ಹಾಕಿ ಮುಚ್ಚಲಾಗಿದೆ. ಸ್ಲ್ಯಾಬ್ ಗಳ ಮೇಲೆ ಶಾಲಾ ಮಕ್ಕಳು ಸೇರಿದಂತೆ ನಾಗರೀಕರು ಓಡಾಡುತ್ತಾರೆ. ಬಹುತೇಕ ಸ್ಲ್ಯಾಬ್ ಗಳು ದುಃಸ್ಥಿತಿಯಲ್ಲಿವೆ. ಕೊಂಚ ಹೆಚ್ಚುಕಮ್ಮಿಯಾದರೂ ಅಪಾಯ ಸಂಭವಿಸುವುದು ನಿಶ್ಚಿತವಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಕಳಪೆ ಕಾಮಗಾರಿಗೆ ಕಾರಣಕರ್ತರಾದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ದ ಕ್ರಮಕೈಗೊಳ್ಳಬೇಕು. ತಕ್ಷಣವೇ ದುರಸ್ತಿ ಕಾಮಗಾರಿ ಆರಂಭಿಸಬೇಕು. ಜೊತೆಗೆ ಘಟನೆಯಲ್ಲಿ ಮೃತಪಟ್ಟ ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು’ ಎಂದು ಎಸ್.ತಂಗರಾಜ್ ಅವರು ಆಗ್ರಹಿಸಿದ್ದಾರೆ.
ಎಚ್ಚೆತ್ತುಕೊಳ್ಳಲಿ : ಶಿವಮೊಗ್ಗ ನಗರದಲ್ಲಿ ಈ ಹಿಂದೆ ಅನುಷ್ಠಾನಗೊಂಡಿರುವ ಹಲವು ಮೂಲಸೌಕರ್ಯ ಕಾಮಗಾರಿಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ನಡೆದಿಲ್ಲ. ಅಸಮರ್ಪಕ ಮೇಲ್ವಿಚಾರಣೆ, ಕಮೀಷನ್ ವ್ಯವಹಾರ, ನಿರ್ವಹಣೆ ಕೊರತೆ, ಭ್ರಷ್ಟಾಚಾರದ ಕಾರಣದಿಂದ ಕಳಪೆಯಾಗಿ ನಡೆದಿವೆ. ಸದ್ಯ ಇಂತಹ ಕಾಮಗಾರಿಗಳು ನಾಗರೀಕರ ಸಾವುನೋವಿಗೆ ಕಾರಣವಾಗುತ್ತಿವೆ. ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.