
ಶಿವಮೊಗ್ಗ – ಪಾರ್ಕ್ ನಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿ ಸಾವು ಪ್ರಕರಣ : ಡಿಸಿ ಕಚೇರಿ ಎದುರು ಪ್ರತಿಭಟನೆ
ಶಿವಮೊಗ್ಗ, ಜ. 30: ನಗರದ ಹೊರವಲಯ ಮುದ್ದಿನಕೊಪ್ಪದ ಟ್ರೀ ಪಾರ್ಕ್ (Tree park) ನಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ, ಸಿಮೆಂಟ್ ನಿಂದ ತಯಾರಿಸಿದ್ದ ಜಿಂಕೆಯ ಕಲಾಕೃತಿ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು. ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಬಾಹುಸಾರ ಕ್ಷತ್ರೀಯ ಮಹಾಜನ ಸಮಾಜ ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ಈ ಸಂಬಂಧ ಮಂಗಳವಾರ ಸಂಘಟನೆಯು ನಗರದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು. ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿತು.
ಗಾಂಧಿ ಬಜಾರ್ ರಸ್ತೆಯ ಗೀತಾಂಜಲಿ ಟೆಕ್ಸ್’ಟೈಲ್ಸ್ ನ ಮಾಲೀಕರಾದ ಹರೀಶ್ ಅಂಬೊರೆ ಮತ್ತು ಲಕ್ಷ್ಮೀ ಅಂಬೊರೆ ದಂಪತಿ ಪುತ್ರಿಯಾದ 6 ವರ್ಷದ ಬಾಲಕಿ ಸಮೀಕ್ಷ ತನ್ನದಲ್ಲದ ತಪ್ಪಿಗೆ ಸಾವನ್ನಪ್ಪಿರುವುದು ಅತೀವ ನೋವಿನ ಸಂಗತಿಯಾಗಿದೆ. ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗುವಂತಾಗಿದೆ.
ಪಾರ್ಕ್ ನಲ್ಲಿ ಪ್ರತಿಮೆ ಮುರಿದಿದ್ದರೂ ದುರಸ್ತಿಗೆ ಕ್ರಮಕೈಗೊಂಡಿಲ್ಲ. ಊದಾಸೀನ ಮಾಡಲಾಗಿದೆ. ಇದರ ಮೇಲೆ ಆಟವಾಡುತ್ತಿದ್ದ ಬಾಲಕಿಯು, ಪ್ರತಿಮೆ ಮುರಿದು ಬಿದ್ದು ಅಸುನೀಗಿದ್ದಾಳೆ ಎಂದು ಸಂಘಟನೆ ತಿಳಿಸಿದೆ.
ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು. ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ಸಂಘಟನೆಯು ಆಡಳಿತಕ್ಕೆ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷರಾದ ಟಿ.ವಿ.ಗಜೇಂದ್ರನಾಥ್, ಪ್ರಮುಖರಾದ ಟಿ.ಡಿ.ಮಂಜುನಾಥ್, ಎನ್.ಕೆ.ಸತ್ಯನಾರಾಯಣ, ಯುವ ಮುಖಂಡ ವಿನಯ್ ವಿ. ತಾಂದ್ಲೆ, ನವೀನ್ ಸಾಕ್ರೆ, ವೆಂಕಟೇಶ್ ಎಂ.ಆರ್., ವಿನಯ್ ತೇಲ್ಕರ್, ನಿಖಿಲ್ ನವಲೆ, ಕಲ್ಯಾಣ್ ಕುಮಾರ್, ಸಂತೋಷ್ ಮಹೇಂದ್ರಕರ್ ಮೊದಲಾದವರಿದ್ದರು.