
ವೈರಲ್ ಆಗುತ್ತಿರುವ ವೀಡಿಯೋದ ಸತ್ಯಾಂಶವೇನು? : ಟ್ರಾಫಿಕ್ ಪೊಲೀಸ್’ಗೆ ಬೆದರಿಕೆ ಹಾಕಿದ ಇಬ್ಬರ ಬಂಧನ!
ಶಿವಮೊಗ್ಗ, ಜ. 1: ಇತ್ತೀಚೆಗೆ ಶಿವಮೊಗ್ಗದ ಬಿ.ಹೆಚ್.ರಸ್ತೆಯ ಕರ್ನಾಟಕ ಸಂಘದ ಬಳಿ ಟ್ರಾಫಿಕ್ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ನಡೆದ ಘಟನೆಯೊಂದರ ವೀಡಿಯೋ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಲಾರಂಭಿಸಿದೆ.
ಸದರಿ ಘಟನೆಗೆ ಸಂಬಂಧಿಸಿದಂತೆ, ಟ್ರಾಫಿಕ್ ಪೊಲೀಸ್ ಪೇದೆಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಇಬ್ಬರನ್ನು ಕೋಟೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಏನೀದು ವೀಡಿಯೋ? : ಜನವರಿ 30 ರಂದು ಪೂರ್ವ ಟ್ರಾಫಿಕ್ ಠಾಣೆ ಪೊಲೀಸರು ಕರ್ನಾಟಕ ಸಂಘದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ, ಬೈಕ್ ಸವಾರನೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೈಕ್ ನಿಂದ ಬಿದ್ದು ಅಸ್ವಸ್ಥಗೊಂಡಿದ್ದ.
ಈ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಠಾಣೆ ಎಎಸ್ಐ ಶ್ರೀನಿವಾಸ್ ಹಾಗೂ ಪ್ರಭು ಅವರು ಆತನನ್ನು ಉಪಚರಿಸುತ್ತಿದ್ದರು. ಈ ವೇಳೆ ಮೊಬೈಲ್ ನಲ್ಲಿ ವೀಡಿಯೋ ಮಾಡುತ್ತಿದ್ದ ವ್ಯಕ್ತಿಯೋರ್ವ, ‘ಪೊಲೀಸರೇ ಹೊಡೆದು ಸಾಯಿಸಿದ್ದಾರೆ’ ಎಂದು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ಹೇಳಿದ್ದ.
ಈ ವೇಳೆ ಅದೇ ಬೈಕ್ ನಲ್ಲಿದ್ದ ಮತ್ತೋರ್ವ, ಪೊಲೀಸ್ ಪೇದೆ ಪ್ರಭು ವಿರುದ್ದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ. ಸ್ಥಳಕ್ಕಾಗಮಿಸಿದ ಮತ್ತೋರ್ವ, ಪೇದೆ ಮೇಲೆ ಹಲ್ಲೆಗೆ ಯತ್ನಿಸುತ್ತಿರುವುದು ವೈರಲ್ ವೀಡಿಯೋದಲ್ಲಿದೆ.
ಅಸ್ವಸ್ಥಗೊಂಡಿದ್ದ ಬೈಕ್ ಸವಾರನನ್ನು ಟ್ರಾಫಿಕ್ ಪೊಲೀಸರು ಆಂಬುಲೆನ್ಸ್ ನಲ್ಲಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆತ ಚೇತರಿಸಿಕೊಂಡು ಮನೆಗೆ ಹಿಂದಿರುಗಿದ್ದ. ತದನಂತರ ಘಟನೆ ಕುರಿತಂತೆ ಟ್ರಾಫಿಕ್ ಪೊಲೀಸ್ ಪೇದೆ ಪ್ರಭುವ ಅವರು ನೀಡಿದ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ವೀಡಿಯೋ ದೃಶ್ಯಾವಳಿ ಆಧಾರದ ಮೇಲೆ, ಕೋಟೆ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮೊಬೈಲ್ ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದಾತ ಸೇರಿದಂತೆ ಇಬ್ಬರು ತಲೆಮರೆಸಿಕೊಂಡಿದ್ಧಾರೆ. ಇವರ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ಧಾರೆ.
ಟ್ರಾಫಿಕ್ ಪೊಲೀಸರ ಸಂಯಮ
*** ಇಬ್ಬರು ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿಯೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದರೂ ಡ್ಯೂಟಿಯಲ್ಲಿದ್ದ ಟ್ರಾಫಿಕ್ ಪೊಲೀಸರು ಸಂಯಮದಿಂದ ವರ್ತಿಸುವ ಮೂಲಕ ಸಂಭಾವ್ಯ ಗೊಂದಲ ತಪ್ಪಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಬೈಕ್ ಸವಾರನನ್ನು ಎಎಸ್ಐ ಶ್ರೀನಿವಾಸ್, ಪೇದೆ ಪ್ರಭು ಅವರು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಘಟನೆಯ ಬಗ್ಗೆ ಎಸ್ಪಿ ಹೇಳಿದ್ದೇನು?
*** ‘ಪೂರ್ವ ಟ್ರಾಫಿಕ್ ಠಾಣೆ ಅಧಿಕಾರಿ – ಸಿಬ್ಬಂದಿಗಳು ಸಂಚಾರಿ ನಿಯಮ ಉಲ್ಲಂಘನೆ ದಂಡ ಹಾಕುವಾಗ ಕೆಲವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ತಕ್ಷಣವೇ ಘಟನೆಯ ಕುರಿತಂತೆ ದೂರು ದಾಖಲಿಸಲಾಗಿತ್ತು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. ಆರೋಪಿಗಳ ವಿರುದ್ದ ಐಪಿಸಿ ಕಲಂ 353, 504, 506 ಅಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಕಾನೂನು ರೀತ್ಯ ಅಪರಾಧವಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.