
ಪ್ರಕರಣ ದಾಖಲಾದ ನಾಲ್ಕು ಗಂಟೆಯಲ್ಲಿಯೇ ಕಳವು ಆರೋಪಿ ಬಂಧಿಸಿದ ಶಿಕಾರಿಪುರ ಪೊಲೀಸರು!
ಶಿಕಾರಿಪುರ, ಫೆ. 2: ಮನೆಯೊಂದರಲ್ಲಿ ಲಕ್ಷಾಂತರ ರೂಪಾಯಿ ಕಳವು ಪ್ರಕರಣದ ದೂರು ದಾಖಲಾದ ನಾಲ್ಕು ಗಂಟೆಯೊಳಗೆ, ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಚೀಲೂರು ಕೆಂಗಟ್ಟೆ ನಿವಾಸಿ ಆಕಾಶ್ (18) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಕಳವು ಮಾಡಿದ್ದ 2 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ : ಶಿಕಾರಿಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದ ನಿವಾಸಿ ಹನುಮಂತನಾಯ್ಕ್ ಎಂಬುವರು ಜನವರಿ 29 ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ, ಅದರ ಕೀಯನ್ನು ಮನೆಯ ಮೇಲ್ಭಾಗದಲ್ಲಿಟ್ಟು ಶಿಕಾರಿಪುರ ಆಸ್ಪತ್ರೆಗೆ ತೆರಳಿದ್ದರು.
ಅವರು ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದಾಗ, ಕಳ್ಳರು ಮನೆಯ ಮೇಲ್ಭಾಗದಲ್ಲಿದ್ದ ಕೀ ಬಳಸಿ ಬಾಗಿಲ ಬೀಗ ತೆರೆದು ಒಳ ಪ್ರವೇಶಿಸಿ, ಬೀರುವಿನಲ್ಲಿದ್ದ ಹಣ ಕಳವು ಮಾಡಿದ್ದು ಬೆಳಕಿಗೆ ಬಂದಿತ್ತು. ತಕ್ಷಣವೇ ಹನುಮಂತನಾಯ್ಕ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಡಿವೈಎಸ್ಪಿ ಶಿವಾನಂದ ಮದರಖಂಡಿ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಆರ್.ಆರ್.ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಎನ್.ವೈ.ಒಲೇಕರ್, ಮಂಜುನಾಥ್, ಎಎಸ್ಐ ತೋಟಪ್ಪ, ಸಿಬ್ಬಂದಿಗಳಾದ ನಾಗರಾಜ, ಲಕ್ಷ್ಮೀಬಾಯಿ, ಪ್ರಶಾಂತ್, ಹಜರತ್ ಅಲಿ, ಶಂಕರನಾಯ್ಕ್, ವಿಜಯಕುಮಾರ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.