
ಹೊಸನಗರ – ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು : ಮೂವರು ಯುವಕರ ಬಂಧನ
ಹೊಸನಗರ, ಫೆ. 2: ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪದ ಮೇರೆಗೆ, ಮೂವರು ಯುವಕನರನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಹೊಸನಗರ ತಾಲೂಕಿನ ನೂಲಿಗೆರೆ ಮೂಡುಗೊಪ್ಪ ಗ್ರಾಮದ ನಿವಾಸಿಗಳಾದ ಸುಹಾನ್ ಯಾನೆ ಸೋನು (21), ಅಶೋಕ (24) ಹಾಗೂ ಗಣೇಶ ಯಾನೆ ಗಣಿ (30) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಫೆ. 1 ರಂದು ಆರೋಪಿಗಳು ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.
ಆರೋಪಿಗಳಿಂದ ಕಳವು ಮಾಡಲಾಗಿದ್ದ 4.65 ಲಕ್ಷ ರೂ. ಮೌಲ್ಯದ 94 ಗ್ರಾಂ ತೂಕದ ಚಿನ್ನಾಭರಣ ಹಾಗೂ ಒಂದು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಇಲಾಖೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಕಳವು : ಮೂಡುಗೊಪ್ಪ ನೂಲಿಗೆರೆ ಗ್ರಾಮದ ರಾಜಮ್ಮ ಎಂಬುವರ ಮನೆಯಲ್ಲಿ, 29-01-2024 ರ ರಾತ್ರಿ ಮನೆಯ ಮೇಲ್ಭಾಗದ ಹೆಂಚು ತೆಗೆದು ಹಾಗೂ ಬಾಗಿಲ ಬೀಗ ಒಡೆದು ಒಳ ಒಳ ಪ್ರವೇಶಿಸಿದ್ದ ಆರೋಪಿಗಳು, ಮನೆಯೊಳಗಿದ್ದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿದ್ದರು. ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವೈಎಸ್ಪಿ ಗಜಾನನ ವಾಮನ ಸುತಾರ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಗುರಣ್ಣ ಹೆಬ್ಬಾಳ್, ಸಬ್ ಇನ್ಸ್’ಪೆಕ್ಟರ್ ರಮೇಶ್ ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ಪ್ರವೀಣ್ ಕುಮಾರ್, ಕಿರಣ್ ಕುಮಾರ್, ವಿಶ್ವನಾಥ್, ಶಾಂತಪ್ಪರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಎಸ್ಪಿ ಅಭಿನಂದನೆ : ಪ್ರಕರಣ ಪತ್ತೆ ಹಚ್ಚುವರಲ್ಲಿ ಸಫಲರಾದ ನಗರ ಠಾಣೆ ಪೊಲೀಸರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.