Notice for control of monkey fever in Shimoga Uttara Kannada Chikkamagaluru districts ಶಿವಮೊಗ್ಗ ಉತ್ತರ ಕನ್ನಡ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಸೂಚನೆ

ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಸೂಚನೆ

ಶಿವಮೊಗ್ಗ, ಫೆ. 4: ಮಂಗನ ಕಾಯಿಲೆ (ಕೆಎಫ್ ಡಿ) ಕಂಡುಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಪ್ರಕರಣಗಳಿಗೆ ಕೆಎಫ್ ಡಿ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಾದ ಡಿ.ರಣದೀಪ್ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಗನ‌ ಕಾಯಿಲೆ(ಕೆಎಫ್ ಡಿ) ಕುರಿತಂತೆ ಫೆ. 3 ರಂದು ಡಿಹೆಚ್ಒ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ‌ ಪರಿಶೀಲನಾ ಸಭೆ ನಡೆಸಿ ಅವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ಜ.೧ ರಿಂದ ಫೆ.೨ ರವರೆಗೆ ರಾಜ್ಯದಲ್ಲಿ ಒಟ್ಟು 2288 ಕೆಎಫ್ ಡಿ ಪರೀಕ್ಷೆ ನಡೆಸಲಾಗಿದ್ದು ಶಿವಮೊಗ್ಗ ದಲ್ಲಿ 12, ಉತ್ತರ ಕನ್ನಡ 34 ಹಾಗು ಚಿಕ್ಕಮಗಳೂರಿನಲ್ಲಿ 3 ಸೇರಿ ಒಟ್ಟು 49 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಂದು ಮರಣ ಸಂಭವಿಸಿದೆ.

ಕೆಎಫ್ ಡಿ ಪಾಸಿಟಿವ್  ಪ್ರಕರಣ ಪತ್ತೆಯಾದ ತಕ್ಷಣ ಆಸ್ಪತ್ರೆ ಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಜನವರಿ ಯಿಂದ ಮಾರ್ಚ್ ವರೆಗೆ ಇದ್ದು ಈ ವೇಳೆ ತಾಲ್ಲೂಕು ಆಸ್ಪತ್ರೆ ಗಳಾದ ತೀರ್ಥ ಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆ ಗಳಲ್ಲಿ ಹಾಸಿಗೆಗಳನ್ನು ಮೀಸಲಿರಿಸಬೇಕು. ಹಾಗು ಅಗತ್ಯ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದರು.

ಸೋಂಕಿತರಿಗೆ ಎಬಿಎಆರ್ ಕೆ ಅಡಿ ರೆಫರ್ ಮಾಡಿ ಉಚಿತ ಚಿಕಿತ್ಸೆ ಕೊಡಿಸಬೇಕೆಂದು ವೈದ್ಯ ರಿಗೆ ಸೂಚಿಸಿದರಲ್ಲದೆ ಜನರಲ್ಲಿ ಕಾಯಿಲೆ ಕುರಿತು ಅರಿವು ಹೆಚ್ಚಿಸಲು‌ ಮಾಹಿತಿ, ಶಿಕ್ಷಣ ಸಂವಹನ ಚಟುವಟಿಕೆಗಳನ್ನು ಮಾಡುವಂತೆ ಸೂಚನೆ ನೀಡಿದರು.

ಮಂಗನ ಕಾಯಿಲೆ ವೈರಾಣು ಸೋಂಕಿತ ಉಣ್ಣಿ ಕಚ್ಚುವುದರಿಂದ ಹರಡುವ ವೈರಲ್ ಜ್ವರವಾಗಿದ್ದು ಜನರು‌ ಕಾಡಿಗೆ ಹೋಗುವ ಮುನ್ನ ಸರ್ಕಾರದ ವತಿಯಿಂದ ನೀಡಲಾಗುವ ಡಿಇಪಿಎ ತೈಲವನ್ನು ಲೇಪಿಸಿಕೊಂಡು ಹೋಗಲು ಸೂಚನೆ ನೀಡಬೇಕು. ಪ್ರಸ್ತುತ ಜಿಲ್ಲೆಯಲ್ಲಿ 50 ಸಾವಿರ  ಬಾಟಲ್ ಲಭ್ಯವಿದೆ.‌ವಿತರಕರ ಬಳಿ ಇರುವುದು‌ಸೇರಿ ಒಟ್ಟು 80 ಸಾವಿರ ದಾಸ್ತಾನಿದೆ. ಒಂದು ಕುಟುಂಬಕ್ಕೆ ತಿಂಗಳಿಗೆ ೪ ಬಾಟಲಿಯಂತೆ ೪-೫ ತಿಂಗಳಿಗೆ ನೀಡಲು ತಿಳಿಸಿದರು.

ಸಾರ್ವಜನಿಕರು ರಾಜ್ಯ ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸುವುದು, ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧ ಲಭ್ಯತೆ, ಉನ್ನತ ರೆಫರಲ್ ಸೆಂಟರ್ ಗೆ ಸಾಗಿಸಲು ಆಂಬುಲೆನ್ಸ್ ಸೌಲಭ್ಯ ಒದಗಿಸುವಂತೆ‌ ಸೂಚಿಸಿದರು. ಟೆಲಿ ಐಸಿಯು ವ್ಯವಸ್ಥೆ ಯಲ್ಲಿ ತಜ್ಞ ವೈದ್ಯರ ತಂಡವಿದ್ದು ಶೀಘ್ರದಲ್ಲೇ ಅದರ ಉಪಯೋಗವನ್ನು ಈ ಕಾಯಿಲೆಗು ನೀಡಲಾಗುವುದು. ಕೆಎಫ್ಡಿ‌ ಹೊಸ ಲಸಿಕೆ ಪ್ರಕ್ರಿಯೆಯಲ್ಲಿದ್ದು ಮುಂದಿನ ಅವಧಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದರು.

ಸಭೆಯಲ್ಲಿ ಉತ್ತರ ಕನ್ನಡ ಡಿಹೆಚ್ ಒ, ಶಿರಸಿಯಲ್ಲಿ ಕೆಎಫ್ ಡಿ ಪರೀಕ್ಷೆ  ನಡೆಸಲು‌ ಒಂದು ಪ್ರಯೋಗಾಲಯ ಸ್ಥಾಪಿಸುವಂತೆ ಮನವಿ ಮಾಡಿದರು. ಸಭೆಗೂ ಮುನ್ನ ಆಯುಕ್ತರು ವೈರಸ್ ಡಯಾಗ್ನಸ್ಟಿಕ್ ಲ್ಯಾಬ್(ವಿಡಿಎಲ್) ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿ, ಸಿಬ್ಬಂದಿ ಗಳೊಂದಿಗೆ ಚರ್ಚಿಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರಾದ ಪುಷ್ಪಲತ, ಸಿಎಂಡಿ‌ ಜಂಟಿ ನಿರ್ದೇಶಕ ರಾದ ಡಾ.ತ್ರಿವೇಣಿ, ವಿಡಿಎಲ್ ಉಪ ನಿರ್ದೇಶಕ ಡಾ.ರಘುನಂದನ್, ಡಿಹೆಚ್ಒ ಡಾ.ರಾಜೇಶ್ ಸುರಗಿಹಳ್ಳಿ, ವಿಡಿಎಲ್ ಡಿಸಿಎಂಒ, ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು.

CM Siddaramaiah advises journalists to reject stupidity and gossip - develop the courage to tell the truth ‘ಮೌಢ್ಯ ಕಂದಾಚಾರ ತಿರಸ್ಕರಿಸಿ - ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ’ – ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ Previous post ‘ಮೌಢ್ಯ, ಕಂದಾಚಾರ ತಿರಸ್ಕರಿಸಿ – ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಿ’ : ಪತ್ರಕರ್ತರಿಗೆ ಸಿಎಂ ಸಿದ್ದರಾಮಯ್ಯ ಸಲಹೆ
Media stumbled in Poonampande case : What did CM's media advisor KV Prabhakar say? ಪೂನಂಪಾಂಡೆ ಪ್ರಕರಣದಲ್ಲಿ ಎಡವಿದ ಮಾಧ್ಯಮಗಳು : ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದೇನು? Next post ಪೂನಂ ಪಾಂಡೆ  ಪ್ರಕರಣದಲ್ಲಿ ಎಡವಿದ ಮಾಧ್ಯಮಗಳು : ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದೇನು?