
ಹೊಳೆಹೊನ್ನೂರಿನ ಜಂಬರಘಟ್ಟದಲ್ಲಿ ಶಾಂತ ಸ್ಥಿತಿ : ನಾಲ್ವರು ಪೊಲೀಸ್ ವಶಕ್ಕೆ – ಪೊಲೀಸ್ ಭದ್ರತೆ
ಶಿವಮೊಗ್ಗ, ಫೆ. 5: ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಂಬರಘಟ್ಟ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಸೋಮವಾರ ಅವರು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಭಾನುವಾರ 20 ವರ್ಷದ ರವಿ ಎಂಬಾತ ಕುರಿ ಕಟ್ಟಿ ಹಾಕುವ ಗೂಟಕ್ಕಾಗಿ ಮರವೊಂದನ್ನು ಕಡಿಯಲು ತೆರಳಿದ್ದು, ಈ ವೇಳೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟವಾಗಿದೆ.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದರ ಆಧಾರದ ಮೇಲೆ ಎಫ್.ಐ.ಆರ್ ದಾಖಲಿಸಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.
ಪ್ರಕರಣದ ಹಿನ್ನಲೆ: ಜಂಬರಘಟ್ಟ ಗ್ರಾಮದ ಯುವಕ ರವಿ ಎಂಬಾತ, ಮನೆಯಲ್ಲಿ ಕುರಿ ಕಟ್ಟುವ ಗೂಟ ಮುರಿದಿದ್ದ ಕಾರಣದಿಂದ ಖಬರಸ್ತಾನದಲ್ಲಿನ ಅಕೇಶಿಯಾ ಮರವೊಂದರ ಕೊಂಬೆಯೊಂದನ್ನು ಕಡಿದಿದ್ದಾನೆ. ಇದನ್ನು ಗಮನಿಸಿದ ಮತ್ತೊಂದು ಕೋಮಿನ ಕೆಲ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತದನಂತರ ಇದೇ ವಿಚಾರದ ಕುರಿತಂತೆ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗೊಂದಲ ಏರ್ಪಟ್ಟಿದೆ. ಈ ಸಂಬಂಧ ಕೆಲ ಗ್ರಾಮಸ್ಥರು ಹೊಳೆಹೊನ್ನೂರು ಪೊಲೀಸ್ ಠಾಣೆ ಮುಂಭಾಗ ಭಾನುವಾರ ರಾತ್ರಿ ಜಮಾಯಿಸಿ, ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.