
ಬಿಜೆಪಿ ರಾಜ್ಯಾಧ್ಯಕ್ಷರ ಶಿವಮೊಗ್ಗ ನಿವಾಸಕ್ಕೆ ಎನ್.ಎಸ್.ಯು.ಐ ಮುತ್ತಿಗೆ ಯತ್ನ!
ಶಿವಮೊಗ್ಗ, ಫೆ. 7: ಶಿವಮೊಗ್ಗ ನಗರದ ಬೈಪಾಸ್ ರಸ್ತೆಯ ಸಮೀಪವಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (bjp state president b y vijayendra) ನಿವಾಸಕ್ಕೆ ಎನ್.ಎಸ್.ಯು.ಐ (nsui) ಸಂಘಟನೆ ಕಾರ್ಯಕರ್ತರು ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದ ಘಟನೆ ಫೆ. 7 ರ ಬುಧವಾರ ನಡೆಯಿತು.
ನಿವಾಸದೆಡೆಗೆ ತೆರಳುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಅರ್ಧಕ್ಕೆ ತಡೆದು ವಶಕ್ಕೆ ಪಡೆದರು. ಸುಮಾರು 33 ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಕೇಂದ್ರ ಸರ್ಕಾರವು ರಾಜ್ಯಕ್ಕೆ ನ್ಯಾಯಬದ್ದವಾಗಿ ನೀಡಬೇಕಾದ ತೆರಿಗೆ ಹಣ ನೀಡದೆ ಸತಾಯಿಸುತ್ತಿದೆ. ಈ ಮೂಲಕ ರಾಜ್ಯದ ನಾಗರೀಕರಿಗೆ ದ್ರೋಹ ಬಗೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ಧಾರೆ.
ಹಾಗೆಯೇ ರಾಜ್ಯದಲ್ಲಿ ಬರಗಾಲ ತಲೆದೋರಿದ್ದು, ನಾಗರೀಕರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಕೇಂದ್ರ ನಯಾಪೈಸೆ ಬರ ಪರಿಹಾರ ಬಿಡುಗಡೆ ಮಾಡದೆ ರಾಜಕೀಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿ.ಎ.ರಮೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ, ನೂರುಲ್ಲಾ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಮುಖಂಡ ಮಧುಸೂಧನ್, ಶಿವು ಸೂಡೂರು, ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ವಿಜಯ್ ಸೇರಿದಂತೆ ಮೊದಲಾದವರಿದ್ದರು.