
ಕಳವು ಚಿನ್ನಾಭರಣಗಳನ್ನ ಖಾಸಗಿ ಫೈನಾನ್ಸ್ ಗಳಲ್ಲಿ ಅಡಮಾನವಿಟ್ಟಿದ್ದ ಆರೋಪಿ!
ಶಿವಮೊಗ್ಗ, ಫೆ. 7: ಕಳೆದ 8 ತಿಂಗಳ ಹಿಂದೆ ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಕಳವು ಮಾಡಿದ್ದ ಆರೋಪಿಯೋರ್ವನನ್ನು, ಶಿವಮೊಗ್ಗದ ದೊಡ್ಡಪೇಟೆ ಠಾಣೆ (doddapete police station) ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಹಾಗೆಯೇ ಕಳವು ಮಾಡಿದ್ದ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ (jewelery) ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗದ ಮಂಜುನಾಥ ಬಡಾವಣೆ ತಿಮ್ಮಾನಗರದ ನಿವಾಸಿ ಸಲೀಂ (44) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 8,28,400 ರೂ. ಮೌಲ್ಯದ 155 ಗ್ರಾಂ 35 ಮಿಲಿ ತೂಕದ ಬಂಗಾರದ ಆಭರಣ, 8,350 ರೂ. ಮೌಲ್ಯದ 109 ಗ್ರಾಂ ತೂಕದ ಬೆಳ್ಳಿ ವಸ್ತುಗಳು,

69,000 ರೂ. ಮೌಲ್ಯದ 500 ಮುಖಬೆಲೆಯ 6 ಸೌದಿ ಅರೇಬಿಯಾದ ರಿಯಾಲ್ ನೋಟುಗಳು, 21,400 ರೂ. ಮೌಲ್ಯದ ವಾಚ್ ಗಳು, ಆರ್ಟಿಫಿಷಿಯಲ್ ಒಡವೆಗಳು, ವ್ಯಾನಿಟಿ ಬ್ಯಾಗ್ ಸೇರಿದಂತೆ ಒಟ್ಟು 10,00,000 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬುಧವಾರ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ.ಜಿ., ಡಿವೈಎಸ್ಪಿಗಳಾದ ಬಾಬು ಅಂಜನಪ್ಪ, ಸುರೇಶ್ ಎಂ.ರವರ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ವಸಂತ್, ಶ್ರೀನಿವಾಸ್ ಆರ್., ಮಂಜಮ್ಮ, ಸಿಬ್ಬಂದಿಗಳಾದ, ಲಚ್ಚಾನಾಯ್ಕ್, ಫಾಲಾಕ್ಷನಾಯ್ಕ್, ಸುರೇಶ್ ಬಿ, ಚಂದ್ರನಾಯ್ಕ್, ಪುನೀತ್ ಕುಮಾರ್ ರವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆ : ಶಿವಮೊಗ್ಗದ ಆರ್.ಎಂ.ಎಲ್ ನಗರದ ನಿವಾಸಿ ಸಲ್ಮಾಖಾನಂ ಎಂಬುವರು 25-05-2022 ರಂದು ಮನೆ ಬಾಗಿಲಿಗೆ ಬೀಗ ಹಾಕಿಕೊಂಡು, ಪತಿ ಕಾರ್ಯನಿರ್ವಹಣೆ ಮಾಡುತ್ತಿರುವ ಸೌದಿ ಅರೇಬೀಯಾ ದೇಶಕ್ಕೆ ಹೋಗಿದ್ದರು.
ನಂತರ 06-06-2023 ರಂದು ಮನೆಗೆ ಆಗಮಿಸಿದಾಗ ಯಾರೋ ಕಳ್ಳರು ಮನೆ ಬಾಗಿಲ ಇಂಟರ್ ಲಾಕ್ ಮುರಿದು, ಗಾಡ್ರೇಜ್ ಬೀರುವಿನಲ್ಲಿದ್ದ ನಗನಾಣ್ಯ ಅಪಹರಿಸಿದ್ದು ಬೆಳಕಿಗೆ ಬಂದಿತ್ತು. ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಡಮಾನ : 02-02-2024 ರಂದು ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆರೋಪಿಯು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಶಿವಮೊಗ್ಗದ ಎರಡು ಖಾಸಗಿ ಫೈನಾನ್ಸ್ ಗಳಲ್ಲಿ ಅಡಮಾನವಿಟ್ಟಿದ್ದು (mortgaged) ಬೆಳಕಿಗೆ ಬಂದಿತ್ತು. ಕಳವು ಮಾಲುಗಳನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.