
17 ವರ್ಷದ ಪುತ್ರನಿಗೆ ಮೊಪೆಡ್ ಓಡಿಸಲು ಅವಕಾಶ ನೀಡಿದ ತಾಯಿಗೆ 30 ಸಾವಿರ ರೂ. ದಂಡ!
ಶಿವಮೊಗ್ಗ, ಫೆ. 8: 17 ವರ್ಷದ ಪುತ್ರನಿಗೆ ದ್ವಿಚಕ್ರ ವಾಹನ ಓಡಿಸಲು ಅವಕಾಶ ಮಾಡಿಕೊಟ್ಟ ತಾಯಿಯೋರ್ವರಿಗೆ, ಶಿವಮೊಗ್ಗದ 3 ನೇ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲವು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ : 30-01-2024 ರಂದು ಪೂರ್ವ ಟ್ರಾಫಿಕ್ ಠಾಣೆ ಸಬ್ ಇನ್ಸ್’ಪೆಕ್ಟರ್ ಮಠಪತಿ ಅವರು ಶಿವಮೊಗ್ಗದ ಎಸ್.ಪಿ.ಎಂ. ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಮೊಪೆಡ್ ನಲ್ಲಿ ಆಗಮಿಸಿದ ಚಾಲಕನ ಬಳಿ ಡಿ.ಎಲ್. ಸೇರಿದಂತೆ ವಾಹನದ ದಾಖಲಾತಿ ಕೇಳಿದ್ದರು. ಅಪ್ರಾಪ್ತ ವಯಸ್ಸಿನ ಬಾಲಕ, ಮೊಪೆಡ್ ಓಡಿಸುತ್ತಿದ್ದುದು ಗಮನಕ್ಕೆ ಬಂದಿತ್ತು. ಸಂಚಾರಿ ನಿಯಮಗಳ ಉಲ್ಲಂಘನೆಯಾಗಿರುವುದು ಕಂಡುಬಂದಿತ್ತು.
ಅಪ್ರಾಪ್ತ ವಯೋಮಾನದ ಬಾಲಕನಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಆರೋಪದ ಮೇರೆಗೆ, ಸದರಿ ಮೊಪೆಡ್’ನ ವಾಹನ ಮಾಲೀಕರೂ ಆದ ಬಾಲಕನ ತಾಯಿಯ ವಿರುದ್ದ ಶಿವಮೊಗ್ಗ ಪೂರ್ವ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ದಾಖಲಿಸಲಾಗಿತ್ತು. ಸದರಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ವಾಹನ ಮಾಲೀಕರಾದ ತಾಯಿಗೆ 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.