
ಗನ್ ಪ್ರದರ್ಶನದ ವೈರಲ್ ವೀಡಿಯೋದ ಸತ್ಯಾಂಶವೇನು? : ಮಕ್ಕಳಾಟದ ನಕಲಿ ಏರ್ ಪಿಸ್ತೂಲ್ ತೋರಿಸಿದ್ದು ಬೆಳಕಿಗೆ…!
ಸಾಗರ, ಫೆ. 12: ಸಾಗರ ಪಟ್ಟಣದಲ್ಲಿ ಯುವಕನೋರ್ವ, ರಸ್ತೆಯಲ್ಲಿಯೇ ಗನ್ ಪ್ರದರ್ಶನ ಮಾಡಿದ್ದ ವೀಡಿಯೋವೊಂದು ವೈರಲ್ ಆಗಿತ್ತು. ಇದು ಕೆಲ ಮಾಧ್ಯಮಗಳಲ್ಲಿಯೂ ಪ್ರಸಾರವಾಗಿ, ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.
ಈ ನಡುವೆ ಸದರಿ ವೀಡಿಯೋ ಕುರಿತಂತೆ, ಪೊಲೀಸ್ ಇಲಾಖೆ ಸೋಮವಾರ ಸ್ಪಷ್ಟನೆ ನೀಡಿದೆ. ‘ಯುವಕ ಪ್ರದರ್ಶಿಸಿದ್ದು ನಿಜವಾದ ಗನ್ ಅಲ್ಲ. ಮಕ್ಕಳಾಟಿಕೆಯ ನಕಲಿ ಏರ್ ಪಿಸ್ತೂಲ್ ಆಗಿದೆ’ ಎಂದು ಮಾಹಿತಿ ನೀಡಿದೆ.
ಸ್ನೇಹಿತರ ನಡುವೆ ಗಲಾಟೆ : ಫೆ. 11 ರಂದು ರಾತ್ರಿ ಸಾಗರ ಪಟ್ಟಣದ ಜೆ. ಪಿ. ರಸ್ತೆಯಲ್ಲಿ ಶಿವಮೊಗ್ಗದ ಆಯನೂರಿನ ನಿವಾಸಿ ದರ್ಶನ್ (19) ಹಾಗೂ ಸಾಗರ ಪಟ್ಟಣದ ನಿವಾಸಿ ನವೀನ್ (25) ಎಂಬ ಇಬ್ಬರು ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು.
ಈ ವೇಳೆ ದರ್ಶನ್ ಎಂಬಾತನು ಮಕ್ಕಳ ಆಟಿಕೆಯ ಏರ್ ಪಿಸ್ತೂಲ್ ತೋರ್ಪಡಿಸಿದ್ದ. ಸದರಿ ಘಟನೆಯ ವೀಡಿಯೋ ತುಣುಕು ವೈರಲ್ ಆಗಿತ್ತು.
ಈ ಕುರಿತಂತೆ ಸಾಗರ ಟೌನ್ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಸೀತಾರಾಂ ಅವರು ಸದರಿ ವೀಡಿಯೋ ಪರಿಶೀಲಿಸಿದ್ದರು. ಜೊತೆಗೆ ವೀಡಿಯೋದಲ್ಲಿದ್ದ ಇಬ್ಬರು ಯುವಕರನ್ನು ಫೆ. 12 ರಂದು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು.
ಈ ವೇಳೆ ಯುವಕನು ಮಕ್ಕಳಾಟಿಕೆಯ ನಕಲಿ ಏರ್ ಪಿಸ್ತೂಲ್ ಪ್ರದರ್ಶಿಸಿದ್ದನ್ನು ತಿಳಿಸಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಸ್ನೇಹಿತರಿಬ್ಬರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.