
ಕೋರ್ಟ್’ಗೆ ಹಾಜರಾಗದ ಆರೋಪಿಗಳ ಪತ್ತೆ ಹಚ್ಚಿದ – ಉತ್ತಮವಾಗಿ ಠಾಣಾ ಕಡತಗಳ ನಿರ್ವಹಣೆ ಮಾಡಿದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ
ಶಿವಮೊಗ್ಗ, ಫೆ. 12: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿದ ಹಾಗೂ ಉತ್ತಮವಾಗಿ ಠಾಣಾ ಕಡತಗಳ ನಿರ್ವಹಣೆ ಮಾಡಿದ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಆರೋಪಿಗಳ ಪತ್ತೆ : ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ನಾಗರಾಜ್ ಹೆಚ್ ಸಿ ಹಾಗೂ ಕುಮಾರ್ ನಾಯ್ಕ್ ಹೆಚ್ ಸಿ ರವರು ಒಟ್ಟು 7 ಎಲ್.ಪಿ.ಆರ್, 7 ಪ್ರೊಕ್ಲಮೇಷನ್ ಹಾಗೂ 19 ಜನ ತಲೆ ಮರೆಸಿಕೊಂಡಿದ್ದ ವಾರೆಂಟ್ ಆಸಾಮಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಫಲರಾಗಿದ್ದಾರೆ.
ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ಸಿಬ್ಬಂದಿ ರಾಘವೇಂದ್ರ ಹೆಚ್ ಸಿ ಹಾಗೂ ಸಜ್ಜನ್ ರಾವ್ ಸಿಪಿಸಿ ರವರು ಒಟ್ಟು 4 ಎಲ್.ಪಿ.ಆರ್, 3 ಪ್ರೊಕ್ಲಮೇಷನ್ ಮತ್ತು 14 ಜನ ತಲೆ ಮರೆಸಿಕೊಂಡಿದ್ದ ವಾರೆಂಟ್ ಆಸಾಮಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಕಡತ ನಿರ್ವಹಣೆ : ಹಾಗೆಯೇ ಸಾಗರ ಪೊಲೀಸ್ ಠಾಣೆಯ ಶಂಕರ್ ಹೆಚ್ ಸಿ ಮತ್ತು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯ ದ್ಯಾಮಣ್ಣ ಹೆಚ್ ಸಿ ಅವರು, ಠಾಣಾ ಬರಹಗಾರರಾಗಿ ಮತ್ತು ಕಡತಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದರು.
ಸನ್ಮಾನ : ಶಿವಮೊಗ್ಗದ ಎಸ್ಪಿ ಕಚೇರಿಯಲ್ಲಿ ಫೆ. 12 ರಂದು ಸದರಿ ಸಿಬ್ಬಂದಿಗಳಿಗೆ ಎಸ್ಪಿ ಅವರು ಸನ್ಮಾನಿಸುವುದರ ಜೊತೆಗೆ, ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.