
ಶಿವಮೊಗ್ಗ : 15 ಲಕ್ಷ ರೂ. ಮೌಲ್ಯದ ನಗನಾಣ್ಯ ಕಳವು – ಕಡೂರು ಮೂಲದ ಯುವಕ ಅರೆಸ್ಟ್!
ಶಿವಮೊಗ್ಗ, ಫೆ. 13: ಮನೆಯೊಂದರಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ – ನಗದು ಕಳವು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ತುಂಗಾ ನಗರ ಠಾಣೆ (tunga nagara police station) ಪೊಲೀಸರು ಯುವಕನೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಚಿಕ್ಕಪಟ್ಟಣಗೆರೆ ನಿವಾಸಿ ಶಶಿನಾಯ್ಕ್ (27) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಕಳವು ಮಾಡಿದ್ದ 286 ಗ್ರಾಂ ತೂಕದ 15,73,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 6020 ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರಿಯಪ್ಪ ಎ.ಜಿ., ಡಿವೈಎಸ್ಪಿ ಬಾಬು ಆಂಜನಪ್ಪ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಮಂಜುನಾಥ್ ಬಿ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಶಿವಪ್ರಸಾದ್ ವಿ, ಮಂಜುನಾಥ್, ರಘುವೀರ್ ಎಂ, ಕುಮಾರ್ ಕೂರಗುಂದ, ದೂದ್ಯನಾಯ್ಕ್, ಎಎಸ್ಐ ಮನೋಹರ್, ಸಿಬ್ಬಂದಿಗಳಾದ ಹೆಚ್.ಸಿ. ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಸಿಪಿಸಿಗಳಾದ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ್, ಲಂಕೇಶ್ ಕುಮಾರ್, ಕಾಂತರಾಜ್, ಹರೀಶ್ ಎಂ.ಜಿ. ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : 8-2-2024 ರಂದು ಮಲವಗೊಪ್ಪ ಗ್ರಾಮದ ನಿವಾಸಿ ನವೀನ್ ಕುಮಾರ್ ನಾಯ್ಕ್ ಎಂಬುವರ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು. ಬೀರುವಿನ ಬಾಗಿಲು ಮುರಿದು ಅದರೊಳಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಅಪಹರಿಸಿಸಲಾಗಿತ್ತು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೆಚ್ಚುಗೆ : ಪ್ರಕರಣ ಬೇಧಿಸುವಲ್ಲಿ ಸಫಲವಾದ ತುಂಗಾನಗರ ಠಾಣೆ ಪೊಲೀಸ್ ತಂಡಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಅಭಿನಂದಿಸಿದ್ದಾರೆ.