
ಸ್ಮಾರ್ಟ್ ಸಿಟಿಯೋ..? ಕತ್ತಲೆ ಸಿಟಿಯೋ..? : ಶಿವಮೊಗ್ಗ ದುರ್ಗಿಗುಡಿ ರಸ್ತೆಯಲ್ಲಿ ಬೀದಿ ದೀಪಗಳ ಅವ್ಯವಸ್ಥೆ..!
ವರದಿ : ಬಿ.ರೇಣುಕೇಶ್
ಶಿವಮೊಗ್ಗ, ಫೆ. 14: ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರಾದ್ಯಂತ ಕೋಟಿ ಕೋಟಿ ರೂ. ವೆಚ್ಚದಲ್ಲಿ ಎಲ್.ಇ.ಡಿ ಬೀದಿ ದೀಪಗಳ ಅಳವಡಿಕೆ ಮಾಡಲಾಗಿದೆ. ಕೆಲ ರಸ್ತೆ, ವೃತ್ತಗಳು ರಾತ್ರಿ ವೇಳೆ ವಿದ್ಯುತ್ ದೀಪಗಳಿಂದ ಝಗಮಗಿಸುತ್ತವೆ.
ಆದರೆ ಶಿವಮೊಗ್ಗದ ಹೃದಯ ಭಾಗವಾದ, ಪ್ರಮುಖ ವ್ಯಾಪಾರ-ವಹಿವಾಟು ಕೇಂದ್ರವಾದ, ಪ್ರತಿನಿತ್ಯ ಸಾವಿರಾರು ಜನ – ವಾಹನ ಸಂಚಾರವಿರುವ ದುರ್ಗಿಗುಡಿ ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಇದಕ್ಕೆ ತದ್ವಿರುದ್ದವಾಗಿದೆ.
ಕಳೆದ ಹಲವು ತಿಂಗಳುಗಳಿಂದ ಸದರಿ ಪ್ರದೇಶಗಳಲ್ಲಿ ಬೀದಿ ದೀಪಗಳು ಬೆಳಗುತ್ತಿಲ್ಲವಾಗಿದೆ! ರಾತ್ರಿ ವೇಳೆ ಕಾರ್ಗತ್ತಲು ಆವರಿಸುತ್ತಿದೆ. ಕುಗ್ರಾಮಗಳಿಗೂ ಕಡೆಯಾದ ಸ್ಥಿತಿ ನೆಲೆಸುವಂತಾಗಿದೆ. ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ವಾಣಿಜ್ಯ ಕಟ್ಟಡಗಳ ಬೆಳಕಿನಿಂದ ದುರ್ಗಿಗುಡಿ ಮುಖ್ಯ ರಸ್ತೆ ಹಾಗೂ ಸಮಾನಂತರ ರಸ್ತೆಗಳಲ್ಲಿ ಸಂಜೆ ವೇಳೆ ಬೆಳಕು ಬೀಳುತ್ತದೆ. ತದನಂತರ ರಾತ್ರಿ ವೇಳೆ ರಸ್ತೆಯಲ್ಲಿ ಕತ್ತಲು ಆವರಿಸುತ್ತದೆ. ಜನ – ವಾಹನ ಸಂಚಾರ ದುರಸ್ತರವಾಗಿ ಪರಿಣಮಿಸುವಂತಾಗಿದೆ.
ರಾತ್ರಿ ವೇಳೆ ಸ್ಥಳೀಯರು ಮನೆಯಿಂದ ಹೊರಬರಲು ಭಯಪಡುವಂತಹ ಸ್ಥಿತಿಯಿದೆ. ನಗರದ ಹೃದಯ ಭಾಗದಲ್ಲಿಯೇ ಇಂತಹ ದುಃಸ್ಥಿತಿಯಿದ್ದರೂ ಇಲ್ಲಿಯವರೆಗೂ ಅವ್ಯವಸ್ಥೆ ಸರಿಪಡಿಸಲು ಮಹಾನಗರ ಪಾಲಿಕೆ ಆಡಳಿತ ಸರಿಪಡಿಸಲ ಮುಂದಾಗಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ.
ಇನ್ನಾದರೂ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ. ಕಾಲಮಿತಿಯೊಳಗೆ ದುರ್ಗಿಗುಡಿ ಮುಖ್ಯ ರಸ್ತೆ ಹಾಗೂ ಇಕ್ಕೆಲಗಳಲ್ಲಿ ಬೀದಿ ದೀಪ ಅಳವಡಿಸಿ ನೆರವಾಗುವ ಕಾರ್ಯ ನಡೆಸಬೇಕಾಗಿದೆ ಎಂದು ಸ್ಥಳೀಯ ವರ್ತಕರು ಹಾಗೂ ನಿವಾಸಿಗಳು ಆಗ್ರಹಿಸುತ್ತಾರೆ.