
ರಾಜ್ಯ ಬಜೆಟ್ : ಶಿವಮೊಗ್ಗ ಜಿಲ್ಲೆಯ ನಿರೀಕ್ಷೆಗಳೇನು..?
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜ. 15: ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರು ಫೆ. 16 ರಂದು ಬಜೆಟ್ (budget) ಮಂಡನೆ ಮಾಡುತ್ತಿದ್ದಾರೆ. ಶಿವಮೊಗ್ಗ ನಗರ (shimoga city) ಹಾಗೂ ಜಿಲ್ಲೆಗೆ ಸಂಬಂಧಿಸಿದ ಹಲವು ಆಡಳಿತಾತ್ಮಕ ವಿಷಯಗಳು, ದಶಕಗಳಿಂದ ರಾಜ್ಯ ಸರ್ಕಾರದ ಹಂತದಲ್ಲಿ ನೆನೆಗುದಿಗೆ ಬಿದ್ದಿವೆ. ನಾಗರೀಕರಿಗೆ ಅನುಕೂಲಕರವಾದ ಯೋಜನೆಗಳ ಅನುಷ್ಠಾನದ ಕುರಿತಂತೆ ಆಡಳಿತಗಾರರು ದಿವ್ಯ ನಿರ್ಲಕ್ಷ್ಯ ಧೋರಣೆ ಅನುಸರಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ರಾಜ್ಯ ಬಜೆಟ್ (state budget) ನಲ್ಲಿ ಈ ಯೋಜನೆಗಳಿಗೆ ಒತ್ತು ಸಿಗಲಿದೆಯೇ ಎಂಬ ನಿರೀಕ್ಷೆ ಜನಮಾನಸದಲ್ಲಿದೆ. ವಿವರಗಳು ಮುಂದಿನಂತಿದೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್
ಬಡ – ಮಧ್ಯಮ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಹಾಲಿ ಭದ್ರಾವತಿ ನಗರದಲ್ಲಿರುವ ಸರ್ಕಾರಿ ಐಟಿಐ ಕೇಂದ್ರದಲ್ಲಿಯೇ ಎಂಜಿನಿಯರಿಂಗ್ ಕಾಲೇಜ್ ಆರಂಭಿಸಿದರೆ ಸಾಕಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯವಿದೆ. ಆದರೆ ಖಾಸಗಿ ಲಾಬಿ ಸೇರಿದಂತೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿಲ್ಲ. ಇದರಿಂದ ಬಡ – ಮಧ್ಯಮ ವರ್ಗದ ಎಂಜಿನಿಯರ್ ವಿದ್ಯಾಭ್ಯಾಸ ಮಾಡುವ ಆಕಾಂಕ್ಷಿಗಳು ದುಬಾರಿ ಹಣ ತೆತ್ತು ಖಾಸಗಿ ಕಾಲೇಜ್ ಗಳತ್ತ ಮುಖ ಮಾಡುವಂತಾಗಿದೆ.
ತಾಲೂಕು ಕೇಂದ್ರಗಳ ರಚನೆ
ಜನಸಂಖ್ಯೆ, ಪ್ರದೇಶಗಳ ಬೆಳವಣಿಗೆಗೆ ಅನುಗುಣವಾಗಿ ಹೊಸ ತಾಲೂಕುಗಳ ರಚನೆ ಮಾಡಲಾಗುತ್ತದೆ. ಆದರೆ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಅದೆಷ್ಟೊ ದಶಕಗಳಿಂದ ಯಾವುದೇ ಹೊಸ ತಾಲೂಕು ಕೇಂದ್ರಗಳ ರಚನೆಯೇ ಆಗಿಲ್ಲ! ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ತಾಲೂಕು ಕೇಂದ್ರಗಳ ರಚನೆ, ಭದ್ರಾವತಿಯಲ್ಲಿ ಹೊಳೆಹೊನ್ನೂರು, ಶಿಕಾರಿಪುರದಲ್ಲಿ ಶಿರಾಳಕೊಪ್ಪ, ಸೊರಬದಲ್ಲಿ ಆನವಟ್ಟಿ ತಾಲೂಕು ಕೇಂದ್ರಗಳ ರಚನೆಯಾಗಬೇಕಾಗಿದೆ.
ಪಾಲಿಕೆ ವ್ಯಾಪ್ತಿ ಪರಿಷ್ಕರಣೆ
ದೇಶ, ರಾಜ್ಯದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ 2 ನೇ ಹಂತದ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಶರವೇಗದಲ್ಲಿ ನಗರ ಬೆಳೆಯುತ್ತಿದೆ. ಆದರೆ ನಗರದ ಬೆಳವಣಿಗೆಗೆ ಅನುಗುಣವಾಗಿ ಮೂಲಸೌಕರ್ಯ ವ್ಯವಸ್ಥೆ ಅಭಿವೃದ್ದಿಯಾಗಿಲ್ಲ. 25 ವರ್ಷಗಳ ಹಿಂದೆ ಅಂದಿನ ನಗರಸಭೆ ಆಡಳಿತಾವಧಿಯಲ್ಲಿ ನಗರ ವ್ಯಾಪ್ತಿ ಪರಿಷ್ಕರಿಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೆ ನಗರ ವ್ಯಾಪ್ತಿ ಪರಿಷ್ಕರಣೆಯಾಗಿಲ್ಲ. ಗ್ರಾಮ ಪಂಚಾಯ್ತಿ ಅಧೀನದಲ್ಲಿರುವ ಒಂದೇ ಒಂದು ಪ್ರದೇಶವೂ ನಗರಾಡಳಿತಕ್ಕೆ ಸೇರ್ಪಡೆಯಾಗಿಲ್ಲ. ಇದರಿಂದ ನಗರದಂಚಿನಲ್ಲಿರುವ ವಸತಿ ಪ್ರದೇಶಗಳ ನಿವಾಸಿಗಳು ನಾನಾ ತೊಂದರೆ ಎದುರಿಸುವಂತಾಗಿದೆ. ನಗರವು ಕೂಡ ಅಸ್ತವ್ಯಸ್ತವಾಗಿ ಬೆಳೆವಣಿಗೆಯಾಗುವಂತಾಗಿದೆ.ಈ ಕಾರಣದಿಂದ ವೈಜ್ಞಾನಿಕವಾಗಿ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಯಾಗಬೇಕು. ಜನಸಂಖ್ಯೆಗೆ ಅನುಗುಣವಾಗಿ ಹಾಲಿಯಿರುವ 35 ವಾರ್ಡ್ ಗಳನ್ನು ಕನಿಷ್ಠ 50 ರಿಂದ 60 ವಾರ್ಡ್ ರಚನೆ ಮಾಡಬೇಕಾಗಿದೆ.
ಪೊಲೀಸ್ ಕಮೀಷನರೇಟ್
ರಾಜ್ಯದಲ್ಲಿ ಅತೀ ಹೆಚ್ಚು ಅಪರಾಧ ಕೃತ್ಯಗಳು ವರದಿಯಾಗುವ ನಗರಗಳಲ್ಲಿ ಶಿವಮೊಗ್ಗವೂ ಕೂಡ ಒಂದಾಗಿದೆ. ಹಾಗೆಯೇ ದೇಶದ ಕೋಮು ಸೂಕ್ಷ್ಮ ಪ್ರದೇಶಗಳಲ್ಲೊಂದಾಗಿದೆ. ಆದರೆ ಜನಸಂಖ್ಯೆ, ನಗರದ ಬೆಳವಣಿಗೆ, ಅಪರಾಧ ಕೃತ್ಯಗಳಿಗೆ ಅನುಗುಣವಾಗಿ ಪೊಲೀಸ್ ಬಲವಿಲ್ಲವಾಗಿದೆ. ಈ ಕಾರಣದಿಂದ ಶಿವಮೊಗ್ಗ – ಭದ್ರಾವತಿ ನಗರಗಳನ್ನೊಳಗೊಂಡಂತೆ, ಪೊಲೀಸ್ ಕಮೀಷನರೇಟ್ ಸ್ಥಾಪಿಸಬೇಕೆಂಬ ಬೇಡಿಕೆ ಕಳೆದ ಹಲವು ವರ್ಷಗಳಿಂದಿದೆ. ಎಲ್ಲ ಅರ್ಹತೆ ಹೊಂದಿದ್ದರೂ ಕಮಿಷನರೇಟ್ ಸ್ಥಾಪನೆಯಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿಕೊಂಡು ಬರಲಾಗುತ್ತಿದೆ.
ಜಿಲ್ಲಾಡಳಿತ ಭವನ
ನಗರದ ವಿವಿಧೆಡೆ ಕಾರ್ಯನಿರ್ವಹಣೆ ಮಾಡುತ್ತಿರುವ ಎಲ್ಲ ಸರ್ಕಾರಿ ಕಚೇರಿಗಳನ್ನು, ಒಂದೇ ಸೂರಿನಡಿ ತರುವ ಮೂಲಕ ನಾಗರೀಕರಿಗೆ ಅನುಕೂಲ ಕಲ್ಪಿಸಿಕೊಡಲು ಶಿವಮೊಗ್ಗ ನಗರದಲ್ಲಿ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮತಿ ಕೂಡ ನೀಡಲಾಗಿತ್ತು. ಇಲ್ಲಿಯವರೆಗೂ ಭವನ ನಿರ್ಮಾಣ ಕಾರ್ಯ ಆರಂಭವಾಗಿಲ್ಲ.
ತುಂಗಾ ಡ್ಯಾಂ ನೀರು
ಶಿವಮೊಗ್ಗ ನಗರದ ಜನಸಂಖ್ಯೆಗೆ ಅನುಗುಣವಾಗಿ ತುಂಗಾ ಜಲಾಶಯದಿಂದ ಹೆಚ್ಚುವರಿ ನೀರು ಪೂರೈಕೆಗೆ ಯೋಜನೆ ಅನುಷ್ಠಾನಗೊಳಿಸುವುದು ಅತ್ಯಂತ ತುರ್ತು ಅಗತ್ಯಗಳಲ್ಲೊಂದಾಗಿದೆ. ಸದ್ಯ ನಗರದಲ್ಲಿರುವ ಜನಸಂಖ್ಯೆ, ಬೇಡಿಕೆಗೆ ಅನುಗುಣವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.
ಆಯುಷ್ ವಿವಿ ಕಾರ್ಯಾರಂಭಕ್ಕೆ ಕ್ರಮ
ಉಳಿದಂತೆ ದಕ್ಷಿಣ ಭಾರತದ ಮೊಟ್ಟಮೊದಲ ಆಯುಷ್ ವಿವಿ ಕಾರ್ಯಾರಂಭಕ್ಕೆ ಕ್ರಮ, ಶಿವಮೊಗ್ಗ ಕೇಂದ್ರವಾಗಿಟ್ಟುಕೊಂಡು ಪ್ರತ್ಯೇಕ ವಿದ್ಯುತ್ ವಲಯ ಸ್ಥಾಪನೆಗೆ ಕ್ರಮಕೈಗೊಳ್ಳಬೇಕಾಗಿದೆ.
ರೈತರ ಸಮಸ್ಯೆ ಪರಿಹಾರಕ್ಕೆ ಕ್ರಮ
ಜಿಲ್ಲೆಯಲ್ಲಿ ಬಗರ್ ಹುಕುಂ ಸಮಸ್ಯೆ ಪರಿಹಾರಕ್ಕೆ ಹಾಗೂ ದಶಕಗಳ ಹಿಂದೆ ವಿವಿಧ ಯೋಜನೆಗಳಿಗೆ ಸಂತ್ರಸ್ತರಾದವರ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ಕಾರ್ಯಪಡೆಗಳ ರಚನೆ ಮಾಡಬೇಕಾಗಿದೆ.