
‘ಸಿದ್ದು’ ಬಜೆಟ್ ನಲ್ಲಿ ಶಿವಮೊಗ್ಗದ ಪ್ರಮುಖ ಆಡಳಿತಾತ್ಮಕ ಯೋಜನೆಗಳಿಗೆ ಸಿಗದ ಒತ್ತು..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಫೆ. 16: ಲೋಕಸಭೆ ಚುನಾವಣೆ ಸಮೀಪದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ, ಶಿವಮೊಗ್ಗ ಜಿಲ್ಲೆಯ ಪ್ರಮುಖ ಆಡಳಿತಾತ್ಮಕ ಬೇಡಿಕೆಗಳಿಗೆ ಆದ್ಯತೆ ಸಿಗುವ ನಿರೀಕ್ಷೆಯಿತ್ತು. ಆದರೆ ಇದು ಹುಸಿಯಾಗಿದೆ. ಉಳಿದಂತೆ ಬಜೆಟ್ ನಲ್ಲಿ ಕೆಲ ಜನೋಪಯೋಗಿ ಯೋಜನೆಗಳಿಗೆ ಅವಕಾಶ ಸಿಕ್ಕಿದೆ.
ಬಜೆಟ್ ನಲ್ಲಿ ಸಿಕ್ಕಿದ್ದು : ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಬಳಿ ಸರ್ಕಾರಿ – ಖಾಸಗಿ ಸಹಭಾಗಿತ್ವದಲ್ಲಿ ‘ಆಹಾರ ಪಾರ್ಕ್’ ಸ್ಥಾಪನೆಯ ಘೋಷಣೆ ಮಾಡಲಾಗಿದೆ. ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತು ಉತ್ತೇಜನದ ಉದ್ದೇಶ ಒಳಗೊಂಡಿರುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ.
ಸಣ್ಣ ನೀರಾವರಿ ಇಲಾಖೆಯಡಿ ಸೊರಬ ತಾಲೂಕಿನ ವರದಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
ಶಿವಮೊಗ್ಗ – ಬೊಮ್ಮನಕಟ್ಟೆ ರಸ್ತೆಯ ರೈಲ್ವೆ ಗೇಟ್ ಬಳಿ ಫ್ಲೈ ಓವರ್ – ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ಅನುದಾನ ಮೀಸಲಿರಿಸಲಾಗಿದೆ. ಆರೋಗ್ಯ ಇಲಾಖೆಯಡಿ ಶಿವಮೊಗ್ಗದ ಜಿಲ್ಲಾಸ್ಪತ್ರೆಯಲ್ಲಿ ಐಪಿಹೆಚ್ಎಲ್ ಪ್ರಯೋಗಾಲಯ ನಿರ್ಮಾಣ ಮಾಡುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ.
ಶಿವಮೊಗ್ಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೈ ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಅವರ ಸ್ಮಾರಕ ನಿರ್ಮಾಣ, ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ನಿರ್ಮಾಣ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯ-ನಾವೀನ್ಯತೆ ಕೇಂದ್ರ ಸ್ಥಾಪನೆ…
ನೆನೆಗುದಿಗೆ ಬಿದ್ದಿದ್ದು : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ನೂತನ ತಾಲೂಕು ಕೇಂದ್ರ (ಶಿವಮೊಗ್ಗ ಗ್ರಾಮಾಂತರ, ಆನವಟ್ಟಿ, ಶಿರಾಳಕೊಪ್ಪ, ಹೊಳೆಹೊನ್ನೂರು) ಗಳ ರಚನೆ. ಶಿವಮೊಗ್ಗ-ಭದ್ರಾವತಿ ಒಳಗೊಂಡಂತೆ ಪೊಲೀಸ್ ಕಮೀಷನರೇಟ್ ಕಚೇರಿ ಸ್ಥಾಪನೆ.
ಭದ್ರಾವತಿ ಸರ್ಕಾರಿ ಐಟಿಐ ಕಾಲೇಜ್ ನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ನಿರ್ಮಾಣ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಜೊತೆಗೆ ಹೊರವರ್ತುಲ ರಸ್ತೆ ಎರಡನೇ ಹಂತ ನಿರ್ಮಾಣಕ್ಕೆ ರಾಜ್ಯದ ಪಾಲಿನ ಅನುದಾನ ಮೀಸಲಿಡುವುದು.
ಜನಸಂಖ್ಯೆ – ನಗರದ ಬೆಳವಣಿಗೆಗೆ ಅನುಗುಣವಾಗಿ, ಶಿವಮೊಗ್ಗಕ್ಕೆ ತುಂಗಾ ಡ್ಯಾಂನಿಂದ ಹೆಚ್ಚುವರಿ ನೀರು ಪೂರೈಕೆಗೆ ಹೊಸ ಯೋಜನೆ ಘೋಷಣೆ, ಶಿವಮೊಗ್ಗದಲ್ಲಿ ರಾಜ್ಯಕ್ಕೆ ಮಾದರಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಅನುದಾನ, ಆಯುಷ್ ವಿಶ್ವವಿದ್ಯಾಲಯ ಕಾರ್ಯಾರಂಭಕ್ಕೆ ಕ್ರಮ, ಮೆಸ್ಕಾಂ ವಿಭಜಿಸಿ ಶಿವಮೊಗ್ಗ ಕೇಂದ್ರವಾಗಿಟ್ಟುಕೊಂಡು ಮಧ್ಯ ಕರ್ನಾಟಕ ಜಿಲ್ಲೆಗಳಿಗೆ ಪ್ರತ್ಯೇಕ ವಿದ್ಯುತ್ ವಲಯ ಸ್ಥಾಪನೆ,
ಭದ್ರಾವತಿ ಎಂಪಿಎಂ ಕಾರ್ಖಾನೆ ಪುನಾರಾರಂಭಕ್ಕೆ ಕ್ರಮ, ಜಿಲ್ಲೆಯ ಬಗರ್ ಹುಕುಂ ರೈತರ ಸಮಸ್ಯೆ ಹಾಗೂ ವಿವಿಧ ಯೋಜನೆಗಳಡಿ ಸಂತ್ರಸ್ತರಾದವರಿಗೆ ತ್ವರಿತಗತಿಯಲ್ಲಿ ನ್ಯಾಯ ಕಲ್ಪಿಸಲು ಪ್ರತ್ಯೇಕ ಕಾರ್ಯಪಡೆಗಳ ರಚನೆ, ಜಿಲ್ಲೆಯ ಪ್ರವಾಸೋದ್ಯ ಕ್ಷೇತ್ರಗಳ ಬೆಳವಣಿಗೆಗೆ ಪ್ರತ್ಯೇಕ ಅನುದಾನ ಮೀಸಲಿಡುವುದು ಸೇರಿದಂತೆ ಹಲವು ಯೋಜನೆಗಳಿಗೆ ಪ್ರಸ್ತುತ ಬಜೆಟ್ ನಲ್ಲಿ ಅವಕಾಶ ಸಿಕ್ಕಿಲ್ಲವಾಗಿದೆ.