
ಒತ್ತುವರಿಯಾಗಿ, ಹೂಳು – ಕಸಕಡ್ಡಿ ತುಂಬಿಕೊಂಡು ವಿನಾಶದಂಚಿಗೆ ತಲುಪಿದ್ದ ಕೆರೆಗೆ ಮರುಜೀವ..!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಫೆ. 17: ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಶಿವಮೊಗ್ಗ ನಗರದಲ್ಲಿ, ಅಷ್ಟೇ ಶರವೇಗದಲ್ಲಿ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕೆರೆಕಟ್ಟೆಗಳು ಕೂಡ ಕಣ್ಮರೆಯಾಗುತ್ತಿವೆ! ಇಂದಿಗೂ ಕೂಡ ಅದೆಷ್ಟೊ ಕೆರೆಗಳು ಅಸಮರ್ಪಕ ನಿರ್ವಹಣೆ, ಒತ್ತುವರಿ ಮತ್ತೀತರ ಕಾರಣಗಳಿಂದ ವಿನಾಶದಂಚಿಗೆ ತಲುಪುತ್ತಿವೆ.
ಇದೇ ರೀತಿಯಲ್ಲಿ ಶಿವಮೊಗ್ಗ ನಗರದ ಹೊರವಲಯ ಗೆಜ್ಜೇನಹಳ್ಳಿ ಗ್ರಾಮದಲ್ಲಿಯೂ ಜೀವ ಸಂಕುಲಕ್ಕೆ ಆಸರೆಯಾಗಿದ್ದ ಕೆರೆಯೊಂದು, ಕಣ್ಮರೆಯಾಗುವ ಸ್ಥಿತಿಗೆ ತಲುಪಿತ್ತು. ಕೆರೆಯಲ್ಲಿ ಕಸಕಡ್ಡಿ, ಹೂಳು ತುಂಬಿಕೊಂಡು ಜಲ ಸಂಗ್ರಹಣೆಯ ಸಾಮರ್ಥ್ಯ ಸಂಪೂರ್ಣ ಕಡಿಮೆಯಾಗಿತ್ತು. ಸಮತಟ್ಟು ಪ್ರದೇಶವಾಗಿ ಪರಿವರ್ತಿತವಾಗಿತ್ತು.
ಹಾಗೆಯೇ ಕೆರೆಯ ಜಾಗ ಒತ್ತುವರಿಯಾಗಿತ್ತು. ಈ ಎಲ್ಲ ಕಾರಣಗಳಿಂದ ಭಾರೀ ಮಳೆಯಾದ ವೇಳೆ ಕೆರೆಯ ನೀರೆಲ್ಲ ತಗ್ಗು ಪ್ರದೇಶದಲ್ಲಿನ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿತ್ತು. ಭಾರೀ ಮಳೆಯಾದ ಸಂದರ್ಭದಲ್ಲಿಯೂ ಕೆಲ ತಿಂಗಳುಗಳಲ್ಲಿಯೇ ಕೆರೆಯ ನೀರೆಲ್ಲ ಬರಿದಾಗುತ್ತಿತ್ತು.
ಈ ನಡುವೆ ಗೆಜ್ಜೇನಹಳ್ಳಿ ಗ್ರಾಮದ ಮುಖಂಡರಾದ ದೂದ್ಯನಾಯ್ಕ್, ಈರಾನಾಯ್ಕ್ ಮೊದಲಾದವರು ಕೆರೆ ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಮುಖರಿಗೆ ಮನವಿ ಅರ್ಪಿಸಿ, ಕೆರೆಯ ಜೀರ್ಣೋದ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ, ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ಕೆರೆಯ ಜೀರ್ಣೋದ್ಧಾರಕ್ಕೆ ಕ್ರಮಕೈಗೊಳ್ಳಲಾಗಿತ್ತು. ಅದರಂತೆ ಕೆರೆ ಜಾಗ ಒತ್ತುವರಿ ತೆರವುಗೊಳಿಸಲಾಗಿದೆ. ಕಳೆದ ಹಲವು ದಿನಗಳಿಂದ ಕೆರೆಯಲ್ಲಿ ತುಂಬಿಕೊಂಡಿದ್ದ ಕಸಕಡ್ಡಿ, ಹೂಳು ತೆಗೆಯುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣ ಹಂತಕ್ಕೆ ಬಂದಿದೆ.
‘ಕಣ್ಮರೆಯಾಗುವ ಹಂತದಲ್ಲಿದ್ದ ಕೆರೆಯೊಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಕಾರದಿಂದ ಉಳಿಯುವಂತಾಗಿದೆ. ವಿನಾಶದಂಚಿಗೆ ತಲುಪಿದ್ದ ಕೆರೆಯು ಮತ್ತೆ ಮರು ಜೀವ ಪಡೆದುಕೊಳ್ಳುವಂತಾಗಿದೆ. ಸಂಘದ ಸಾಮಾಜಿಕ ಕಾರ್ಯ ಅಭಿನಂದನೀಯ’ವಾಗಿದೆ ಎಂದು ಸ್ಥಳೀಯ ಮುಖಂಡ ದೂದ್ಯನಾಯ್ಕ್ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
‘ಜೀವ ಸಂಕುಲಕ್ಕೆ ಆಸರೆಯಾಗಲಿದೆ’ : ಮುಖಂಡ ದೂದ್ಯನಾಯ್ಕ್

*** ‘ಕಣ್ಮರೆಯಾಗುವ ಹಂತದಲ್ಲಿದ್ದ ಗ್ರಾಮದ ಕೆರೆಯೊಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಕಾರದಿಂದ ಉಳಿಯುವಂತಾಗಿದೆ. ವಿನಾಶದಂಚಿಗೆ ತಲುಪಿದ್ದ ಕೆರೆಯು ಮತ್ತೆ ಮರು ಜೀವ ಪಡೆದುಕೊಳ್ಳುವಂತಾಗಿದೆ. ಸಂಘದ ಸಾಮಾಜಿಕ ಕಾರ್ಯ ಅಭಿನಂದನೀಯವಾಗಿದೆ. ಎಂದು ಸ್ಥಳೀಯ ಮುಖಂಡ ದೂದ್ಯನಾಯ್ಕ್ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ : ಪರಿಸರ ಸಿ. ರಮೇಶ್
*** ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಅವ್ಯಾಹತವಾಗಿ ಕೆರೆಗಳ ಒತ್ತುವರಿಯಾಗಿದೆ. ಭೂಗಳ್ಳರು ರಾಜಾರೋಷವಾಗಿ ಕೆರೆ ಜಾಗಕ್ಕೆ ಬೇಲಿ ಸುತ್ತಿ ಮಾರಾಟ ಮಾಡುತ್ತಿದ್ದಾರೆ. ನವುಲೆ ಗ್ರಾಮದಲ್ಲಿರುವ ಕೆರೆಯು ವಿನಾಶದಂಚಿಗೆ ತಲುಪಿದೆ.

ಇದು ನಿಜ್ಕೂ ದುರಂತದ ಸಂಗತಿಯಾಗಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು. ಶಿವಮೊಗ್ಗ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೆರೆಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕು. ಗೆಜ್ಜೇನಹಳ್ಳಿ ಗ್ರಾಮದ ಕೆರೆ ಸಂರಕ್ಷಣೆಗೆ ಮುಂದಾದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯ ಶ್ಲಾಘನೀಯ. ಹಾಗೆಯೇ ಗ್ರಾಮದ ಮುಖಂಡರ ಇಚ್ಛಶಕ್ತಿ ಕೂಡ ಮನನೀಯವಾದುದಾಗಿದೆ’ ಎಂದು ಪರಿಸರ ಹೋರಾಟಗಾರ ಪರಿಸರ ಸಿ ರಮೇಶ್ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.