
ಶಿರಾಳಕೊಪ್ಪದಲ್ಲಿ ಸಿಡಿದಿದ್ದು ಕಾಡುಹಂದಿಗೆ ಸಾಯಿಸಲು ಬಳಸುವ ಸಿಡಿಮದ್ದು : ಶಿವಮೊಗ್ಗ ಎಸ್ಪಿ ಸ್ಪಷ್ಟನೆ
ಶಿವಮೊಗ್ಗ, ಫೆ. 18: ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದಲ್ಲಿ ಭಾನುವಾರ ಬ್ಯಾಗ್ ವೊಂದರಲ್ಲಿ ಸಿಡಿದಿದ್ದು, ಕಾಡು ಹಂದಿ ಸಾಯಿಸಲು ಬಳಸುವ ಸಿಡಿಮದ್ದಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಭಾನುವಾರ ಮಧ್ಯಾಹ್ನ ವ್ಯಾಟ್ಸಾಪ್ ಸಂದೇಶದ ಮೂಲಕ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. ಕಾಡು ಹಂದಿ ಸಾಯಿಸಲು ಬಳಸುವ ಸಿಡಿಮದ್ದು ಬ್ಯಾಗ್ ನಲ್ಲಿಟ್ಟಿದ್ದು ಪ್ರಾಥಮಿಕ ಹಂತದ ತನಿಖೆಯಿಂದ ಸ್ಪಷ್ಟವಾಗಿದೆ. ಬ್ಯಾಗ್ ನಲ್ಲಿ ಯಾವುದೇ ಸ್ಟೌವ್ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್ಪಿ ಹೇಳಿದ್ದೇನು?: ಉಮೇಶ್ ಮತ್ತು ಅವರ ಪತ್ನಿ ರೂಪ ಅವರು ಶಿರಾಳಕೊಪ್ಪ ಪಟ್ಟಣದ ಸಂತೆಗೆ ಆಗಮಿಸಿದ್ದರು. ರಸ್ತೆ ಬದಿ ಬ್ಲ್ಯಾಂಕೆಟ್ ಮಾರಾಟ ಮಾಡುತ್ತಿದ್ದ ಆಂಥೋನಿ ಎಂಬ ಪರಿಚಯದ ವ್ಯಾಪಾರಿಯಿಂದ ಬ್ಲ್ಯಾಂಕೆಟ್ ಖರೀದಿಸಿದ್ದರು. ನಂತರ ತಮ್ಮ ಬಳಿಯಿದ್ದ ಬ್ಯಾಗ್ ನ್ನು ವ್ಯಾಪಾರಿ ಬಳಿಯಿಟ್ಟು, ಸಂತೆ ಮುಗಿಸಿಕೊಂಡು ಬ್ಯಾಗ್ ತೆಗೆದು ಹೋಗುವುದಾಗಿ ಹೇಳಿ ಹೋಗಿದ್ದರು.
ಸ್ವಲ್ಪ ಹೊತ್ತಿನ ನಂತರ ಸದರಿ ಬ್ಯಾಗ್ ನಿಂದ ಯಾವುದೋ ವಸ್ತು ಸ್ಪೋಟಿಸಿತ್ತು. ಪ್ರಾಥಮಿಕ ಹಂತದ ತನಿಖೆಯ ವೇಳೆ ಸದರಿ ಬ್ಯಾಗ್ ನಿಂದ ಸಿಡಿದಿದ್ದು ಕಾಡು ಹಂದಿ ಸಾಯಿಸಲು ಬಳಸುವ ಸಿಡಿಮದ್ದಾಗಿದೆ. ಯಾವುದೇ ಸ್ಟೌವ್ ಮಾದರಿಯ ವಸ್ತು ಸಿಡಿತವಾಗಿಲ್ಲ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಸಿಡಿಮದ್ದು ಸಿಡಿತದಿಂದ ಗಾಯಗೊಂಡ ವ್ಯಕ್ತಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಪಾದಿತ ವ್ಯಕ್ತಿಯನ್ನು ಗುರುತಿಸಲಾಗಿದ್ದು, ವಶಕ್ಕೆ ಪಡೆಯಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ಧಾರೆ.
ಊಹಾಪೋಹ: ಬ್ಯಾಗ್ ನಿಂದ ಸಿಡಿಮದ್ದು ಸಿಡಿತದ ವಿಷಯವು ಹಲವು ಊಹಾಪೋಹ, ವದಂತಿ ಹಾಗೂ ಸಾಕಷ್ಟು ಗೊಂದಲ ಸೃಷ್ಟಿಯಾಗುವಂತೆ ಮಾಡಿತ್ತು.
ಸುಳ್ಳು ಸುದ್ದಿ ಪ್ರಕಟಿಸಿದರೆ ಕೇಸ್ ದಾಖಲು…!
*** ಶಿರಾಳಕೊಪ್ಪದ ಘಟನೆ ಕುರಿತಂತೆ ಬೇಜವಾಬ್ದಾರಿಯುತ ಹಾಗೂ ಸುಳ್ಳು ಸುದ್ದಿ ಪ್ರಕಟಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ. ಇಂತಹ ಘಟನೆಗಳ ಕುರಿತಂತೆ ಸುದ್ದಿ ಪ್ರಕಟಿಸುವ ಮುನ್ನ ಖಚಿತ ಮಾಹಿತಿ ಪಡೆದು ಪ್ರಕಟಿಸುವಂತೆ ಎಸ್ಪಿ ಅವರು ಮಾಧ್ಯಮದವರಿಗೆ ಕಿವಿಮಾತು ಹೇಳಿದ್ದಾರೆ.