
7 ಜಿಲ್ಲೆಗಳ 6168 ಕೋಟಿ ರೂ. ವೆಚ್ಚದ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಭೂ ಸಾರಿಗೆ ಸಚಿವರಿಂದ ಚಾಲನೆ
ಶಿವಮೊಗ್ಗ, ಫೆ. 19: ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ, ಒಟ್ಟಾರೆ 6168 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಫೆ. 22 ರ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಸೋಮವಾರ ಶಿವಮೊಗ್ಗ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಮಾರಂಭ ಉದ್ಘಾಟನೆ – ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ 139.41 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿರುವ 4 ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಹಾಗೆಯೇ ಈಗಾಗಲೇ ಯೋಜನೆ ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭ ಹಂತದಲ್ಲಿರುವ 2138 ಕೋಟಿ ರೂ. ವೆಚ್ಚದ 6 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದ್ಧಾರೆ.
ಉದ್ಘಾಟನೆಗೊಳ್ಳುತ್ತಿರುವುದು : ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ಮಡೋಡಿ, ಮತ್ತಿಮನೆ, ನಗರ, ಆರೋಡಿ, ಕಾರಣಗಿರಿ, ಮಾವಿನಕೊಪ್ಪ, ಬ್ರಹ್ಮೇಶ್ವರದ 7 ಕಿರು ಸೇತುವೆಗಳು, ಶಿವಮೊಗ್ಗ ನಗರದ ವಿದ್ಯಾನಗರದ ರೈಲ್ವೆ ಮೇಲ್ಸೇತುವೆ,
ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ನಿರ್ಮಿಸಲಾಗಿರುವ ಸೇತುವೆ, ತೀರ್ಥಹಳ್ಳಿ ಪಟ್ಟಣದಲ್ಲಿ ತುಂಗಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಹಾಗೂ ಪಟ್ಟಣದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೈಪಾಸ್ ರಸ್ತೆಯನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಂಕುಸ್ಥಾಪನೆ : ಹೊಸನಗರದ ಮಾವಿನಕೊಪ್ಪದಿಂದ ಆಡುಗೋಡಿವರೆಗೆ 13.80 ಕಿ.ಮೀ. ಬೈಪಾಸ್ ರಸ್ತೆ ಮತ್ತು ಬೆಕ್ಕೊಡಿ, ಹೊಸನಗರ ಬಳಿ ಸೇತುವೆಗಳ ನಿರ್ಮಾಣ, ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹಧಾಮದಿಂದ ಆನಂದಪುರದ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು 4 ಪಥದ ರಸ್ತೆಯಾಗಿ ಪರಿವರ್ತನೆ ಮತ್ತು ಕುಂಸಿ, ಯಡೇಹಳ್ಳಿಯಲ್ಲಿ ರೈಲ್ವೆ ಫ್ಲೈ ಓವರ್ ಹಾಗೂ ಕುಂಸಿ – ಚೋರಡಿ – ಕೋಣೆಹೊಸೂರು – ಯಡೇಹಳ್ಳಿ – ಆನಂದಪುರ ಬಳಿ ರಾಷ್ಟ್ರೀಯ ಹೆದ್ದಾರಿಗೆ ಬೈಪಾಸ್ ರಸ್ತೆಗಳ ನಿರ್ಮಾಣ,
ಸಾಗರದ ಹೊಸೂರು ಹಾಗೂ ತಾಳಗುಪ್ಪ ಬಳಿ ಬೈಪಾಸ್ ರಸ್ತೆ – ಮೇಲ್ಸೇತುವೆಗಳ ನಿರ್ಮಾಣ, ಬೈಂದೂರಿನಿಂದ ನಾಗೋಡಿವರೆಗಿನ ಹೆದ್ದಾರಿಯಲ್ಲಿ ದ್ವಿಪಥ ರಸ್ತೆ ನಿರ್ಮಾಣ, ತೀರ್ಥಹಳ್ಳಿ ತಾಲೂಕಿನ ನೆಲ್ಲಿಸರದಿಂದ ತೀರ್ಥಹಳ್ಳಿ ಪಟ್ಟಣದವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದ್ಧಾರೆ.
ಮಂಜೂರಾತಿ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳು : ಸಾಗರದ ಆವಿನಹಳ್ಳಿ, ಸಿಗಂಧೂರು, ತುಮರಿ ಮೂಲಕ ಮರಕುಟುಕವರೆಗಿನ 67 ಕಿ.ಮೀ. ರಾಷ್ಟ್ರೀಯ ಹೆದ್ಧಾರಿಯನ್ನು ದ್ವಿಪಥ ರಸ್ತೆಯಾಗಿ ಮೇಲ್ದರ್ಜೆಗೇರಿಸುವುದು, ಬೈಂದೂರು – ರಾಣೆಬೆನ್ನೂರು ಹೆದ್ದಾರಿಯ ಹಲವೆಡೆ ದ್ವಿಪಥ ರಸ್ತೆ ನಿರ್ಮಾಣ, ಶಿವಮೊಗ್ಗ ನಗರದ ಉತ್ತರ ಭಾಗದಲ್ಲಿ ಬೈಪಾಸ್ ರಸ್ತೆ ನಿರ್ಮಾಣ,
ಸಾಗರ ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣ, ಶಿವಮೊಗ್ಗ ನಗರದ ಬೊಮ್ಮನಕಟ್ಟೆ ರಸ್ತೆಯಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣ, ಅರಸಾಳು ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ, ಶಿವಮೊಗ್ಗ ಹಾಗೂ ಸಾಗರ ಪಟ್ಟಣದ ಹೆದ್ದಾರಿಗಳಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಯೋಜನೆಗಳಿಗೆ ಕೇಂದ್ರದಿಂದ ಇನ್ನಷ್ಟೆ ಮಂಜೂರಾತಿ ದೊರಕಬೇಕಾಗಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.
ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ : ಶಿವಮೊಗ್ಗ – ಹೊಳಲೂರು – ಹೊನ್ನಾಳ್ಳಿ – ಮಲೆಬೆನ್ನೂರು – ಹರಿಹರ – ಹರಪನಹಳ್ಳಿ – ಇಟಗಿ – ಹಗರಿಬೊಮ್ಮನಹಳ್ಳಿ ಮೂಲಕ ಮರಿಯಮ್ಮನಹಳ್ಳಿವರೆಗಿನ ರಸ್ತೆ, ಸಾಗರ – ಸೊರಬ – ಆನವಟ್ಟಿ – ಹಾನಗಲ್ ಮೂಲಕ ಬಂಕಾಪುರವರೆಗಿನ ರಸ್ತೆ, ಆಯನೂರು – ರಿಪ್ಪನ್’ಪೇಟೆ – ಹುಂಚ – ತೀರ್ಥಹಳ್ಳಿ – ಮಾಸ್ತಿಕಟ್ಟೆ – ಕುಂದಾಪುರ ಮೂಲಕ ಗಂಗೊಳ್ಳಿವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಕೊಲ್ಲೂರಿನಿಂದ ಕೊಡಚಾದ್ರಿ ಬೆಟ್ಟಕ್ಕೆ ನಿರ್ಮಾಣವಾಗಲಿದೆ ರಾಜ್ಯದ ಮೊದಲ ಕೇಬಲ್ ಕಾರ್
ಶಿವಮೊಗ್ಗ ಜಿಲ್ಲೆಯ ಕೊಡಚಾದ್ರಿ ಬೆಟ್ಟದ ಸರ್ವಜ್ಞ ಪೀಠದಿಂದ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಕೇಬಲ್ ಕಾರ್ ನಿರ್ಮಾಣ ಮಾಡಲು ಕೇಂದ್ರ ಭೂ ಸಾರಿಗೆ ಸಚಿವಾಲಯ ಅನುಮತಿ ನೀಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ರಾಜ್ಯದ ಪ್ರಪ್ರಥಮ ಕೇಬಲ್ ಕಾರ್ ಯೋಜನೆಯಾಗಿದೆ. ಒಟ್ಟಾರೆ 3.80 ಕಿ.ಮೀ. ಉದ್ದವಿರಲಿದ್ದು, 380 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅರಣ್ಯ ಭೂಮಿ ಬಿಡುಗಡೆ ಹಾಗೂ ವನ್ಯಜೀವಿ ಮಂಡಳಿಯ ನಿರಪೇಕ್ಷಣಾ ಪತ್ರ ಪಡೆಯುವ ಸಂಬಂಧದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸಂಸದರು ತಿಳಿಸಿದ್ದಾರೆ.