
ಸದನದಲ್ಲಿ ಬಿಜೆಪಿ ಪರ ಹೆಚ್.ಡಿ.ಕುಮಾರಸ್ವಾಮಿ ವಕಾಲತ್ತು : ಟೀಕಾಪ್ರಹಾರ ನಡೆಸಿದ ಸಿಎಂ ಸಿದ್ದರಾಮಯ್ಯ!
ಬೆಂಗಳೂರು, ಫೆ. 20: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸದನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಪರ ವಕಾಲತ್ತು ವಹಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಮಂಗಳವಾರ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡುವ ವೇಳೆಯಲ್ಲಿ ಹೆಚ್.ಡಿ.ಕೆ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂದಿದ್ದಾರೆ. ಆದರೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ರಾಜ್ಯದ ಪಾಲಿನ ಸಂವಿಧಾನಬದ್ದ ಹಕ್ಕನ್ನು, ಅನುದಾನವನ್ನು ಕೇಳುವುದು ಸಂಘರ್ಷ ಆಗುವುದಿಲ್ಲ.
ರಾಜ್ಯಕ್ಕೆ ತೀವ್ರ ಬರಗಾಲ ಬಂದಿದೆ. ಕೇಂದ್ರದಿಂದ ಬರ ಪರಿಹಾರ ಕೇಳಿ 17 ಬಾರಿ ಕೇಂದ್ರಕ್ಕೆ ಬರೆದೆವು. ಇದರಲ್ಲಿ ಒಂದು ಪತ್ರಕ್ಕೆ ಮಾತ್ರ, “ನಿಮ್ಮ ಪತ್ರ ತಲುಪಿದೆ” ಎನ್ನುವ ಉತ್ತರ ಕೇಂದ್ರದಿಂದ ಬಂತು. ಆದರೆ ಉಳಿದ 16 ಪತ್ರಗಳಿಗೆ ಉತ್ತರವೂ ಬರಲಿಲ.
ಕೇಂದ್ರದ ಅನುದಾನ ರಾಜ್ಯಕ್ಕೆ ಇವತ್ತಿನವರೆಗೂ ಒಂದು ಪೈಸೆಯೂ ಬಂದಿಲ್ಲ. ಇದು ನಿಯಮಬದ್ದವಾಗಿ ರಾಜ್ಯದ ಹಕ್ಕು. ರಾಜ್ಯದ ಪಾಲು. ಇದನ್ನೂ ಕೇಂದ್ರ ಕೊಡುತ್ತಿಲ್ಲ. ನಮ್ಮ ಪಾಲನ್ನು, ರಾಜ್ಯದ ಪಾಲನ್ನು ಕೇಳುವುದು ತಪ್ಪಾ? ಇದು ಸಂಘರ್ಷ ಹೇಗಾಗುತ್ತದೆ ಎಂದು ಸಿಎಂ ಪ್ರಶ್ನಿಸಿದ್ದಾರೆ.
ರಾಜ್ಯಕ್ಕೆ ಬರಗಾಲ ಬಂದಾಗ ನರೇಗ ಮಾನವ ದಿನಗಳನ್ನು ನಿಯಮ ಬದ್ದವಾಗಿ 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು. ಇದಕ್ಕಾಗಿ ನಾವು ಪದೇ ಪದೇ ಮನವಿ ಮಾಡಿದರೂ ಮಾನವ ದಿನಗಳನ್ನು ಏರಿಕೆ ಮಾಡಲೇ ಇಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ ಅಲ್ಲವೇ?
ನಮ್ಮ ರಾಜ್ಯದ, ರಾಜ್ಯದ ಹಕ್ಕನ್ನು ಕೇಳುವುದು ತಪ್ಪಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆಗಳ ಮೂಲಕವೇ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ಉತ್ತರಿಸಿದರು.
ಗ್ಯಾರಂಟಿಗಳ ಲೆಕ್ಕ : ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದ್ದನ್ನು ಮುಖ್ಯಮಂತ್ರಿಗಳು ವಿವರಿಸಿದರು. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳಿಂದ ಕೋಟಿ , ಕೋಟಿ ಫಲಾನುಭವಿಗಳು ಅನುಕೂಲ ಪಡೆಯುತ್ತಿರುವುದನ್ನು ಅಂಕಿ ಅಂಶಗಳ ಸಮೇತ ವಿವರಿಸಿದರು.
ಅಕ್ಕಿ ಏಕೆ ಕೊಡಲಿಲ್ಲ: ರಾಜ್ಯದ ಜನರಿಗೆ ಅನ್ನ ಕೊಡುವ ಉದ್ದೇಶದಿಂದ ಕೆಜಿಗೆ 34 ರೂಪಾಯಿ ಕೊಡ್ತೀವಿ, ಈ ಹಣಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದೆವು. ಆದರೆ ರಾಜ್ಯಕ್ಕೆ, ರಾಜ್ಯದ ಜನರಿಗೆ ಅಕ್ಕಿ ಕೊಡಲು ಕೇಂದ್ರ ಒಪ್ಪಲಿಲ್ಲ. ಈಗ 29 ರೂಪಾಯಿಗೆ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗಲೂ ನಮಗೆ ಅದೇ ಬೆಲೆಗೆ ಅಕ್ಕಿ ಕೊಡಿಸಿ. ಅದನ್ನು ನಾವು ಕೇಂದ್ರದಿಂದ ಖರೀದಿಸಿ ರಾಜ್ಯದ ಜನರಿಗೆ ಕೊಡಲು ಸಿದ್ದರಿದ್ದೇವೆ. ನೀವು ಕೇಂದ್ರದ ಜತೆ ಮಾತನಾಡಿ ನಮಗೆ ಅಕ್ಕಿ ಕೊಡಿಸಿ ಎಂದು ಮುಖ್ಯಮಂತ್ರಿಗಳು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.