
ಹಾವೇರಿ, ಗದಗ ಜಿಲ್ಲೆಗಳಿಗೆ ತಲುಪದ ನೀರು : ಭದ್ರಾ ನಾಲೆ – ನದಿ ಸುತ್ತಮುತ್ತ ಫೆ. 26 ರವರೆಗೆ ನಿಷೇಧಾಜ್ಞೆ!
ಅಕ್ರಮವಾಗಿ ಅಳವಡಿಸಿರುವ 20 ಸಾವಿರಕ್ಕೂ ಅಧಿಕ ಪಂಪ್ ಸೆಟ್ ತೆರವುಗೊಳಿಸಲು ನಿರ್ಧಾರ
ಶಿವಮೊಗ್ಗ, ಫೆ. 20: ಭದ್ರಾ ನದಿ ಹಾಗೂ ನಾಲೆಗಳ (bhadra river – canal) ಸುತ್ತಮುತ್ತಲಿನ ಪ್ರದೇಶಗಳಲ್ಲಿನ 100 ಮೀಟರ್ ವ್ಯಾಪ್ತಿಯಲ್ಲಿ ಫೆ. 26 ರವರೆಗೆ ಸಿ.ಆರ್.ಪಿ.ಸಿ. ಕಲಂ 144 ರ ಅನ್ವಯ ನಿಷೇಧಾಜ್ಞೆ (Prohibition) ಜಾರಿಗೊಳಿಸಿ ಶಿವಮೊಗ್ಗ ಜಿಲ್ಲಾಧಿಕಾರಿ (shimoga dc) ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ಡಿಸಿ ಆದೇಶದಲ್ಲಿ ಏನೀದೆ? : 5-2-2024 ರ ರಾತ್ರಿಯಿಂದ ಹಾವೇರಿ ಹಾಗೂ ಗದಗ ಜಿಲ್ಲೆಗಳ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ, ಭದ್ರಾ ಜಲಾಶಯದಿಂದ 1 ಟಿಎಂಸಿ ನೀರು ಹರಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಹಾವೇರಿಯ ಜಾಕ್ ವೆಲ್ ಸ್ಥಳಕ್ಕೂ ನೀರು ತಲುಪಿಲ್ಲವೆಂದು ಸದರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ಶಿವಮೊಗ್ಗ ಡಿಸಿ ಅವರು ಫೆ.19 ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ನದಿ ಪಾತ್ರದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಪಂಪ್ ಸೆಟ್ ಬಳಸಿ ಅಕ್ರಮವಾಗಿ ನೀರು ಬಳಕೆ ಮಾಡಲಾಗುತ್ತಿದೆ. ಹಾಗೂ ನದಿ ಪಾತ್ರದ ಹಲವು ಗ್ರಾಮಗಳಲ್ಲಿ, ಮಣ್ಣು – ಮರಳು ಬಳಸಿ ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ ನೀರು ಬಳಕೆ ಮಾಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಸದರಿ ಜಿಲ್ಲೆಗಳಿಗೆ ಭದ್ರಾ ಡ್ಯಾಂನಿಂದ ಬಿಡಲಾದ ನೀರು ತುಲುಪಿಲ್ಲ.
ಹಾಗೆಯೇ 2023-24 ನೇ ಸಾಲಿಗೆ ಭದ್ರಾ ಕಾಲುವೆಯಲ್ಲಿ ಬೇಸಿಗೆ ಹಂಗಾಮಿಗೆ ನೀರನ್ನು ಹರಿಸಲಾಗುತ್ತಿದೆ. ಕಾಲುವೆಗಳಿಗೆ ಪಂಪ್ ಸೆಟ್ ಅಳವಡಿಸಿ ಅಕ್ರಮವಾಗಿ ನೀರು ಎತ್ತಲಾಗುತ್ತಿದೆ. ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದವರೆಗೆ ನೀರು ಹರಿಸುವುದು ಕಷ್ಟಕರವಾಗಿ ಪರಿಣಮಿಸಿದೆ.
ಈ ಕಾರಣದಿಂದ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದವರೆಗೆ ಮತ್ತು ಕುಡಿಯುವ ನೀರನ್ನು ಪೂರೈಸಲು, ಭದ್ರಾ ನಾಲೆ ಮತ್ತು ನದಿ ಪಾತ್ರಗಳಲ್ಲಿ ಅಳವಡಿಸಿರುವ ಪಂಪ್ ಸೆಟ್, ಡಿಸೇಲ್ ಪಂಪ್ ಸೆಟ್ ಮತ್ತು ಇತರೆ ಉಪಕರಣಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಭದ್ರಾ ನಾಲೆ ಮತ್ತು ನದಿ ಪಾತ್ರದ ಸುತ್ತಮುತ್ತ ಪ್ರದೇಶ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಕಲಂ 144 ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡುವಂತೆ ಕೋರಲಾಗಿದೆ.
ಪ್ರಸ್ತುತ ರಾಜ್ಯ ಮತ್ತು ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ. ಕುಡಿಯುವ ನೀರಿಗೆ ಸಾಕಷ್ಟು ಬೇಡಿಕೆಯಿದೆ. ಭದ್ರಾ ನಾಲಾ ಕಾಲುವೆಯಿಂದ ಅನೇಕ ಗ್ರಾಮಗಳಿಗೆ ಕುಡಿಯುವ ನೀರು ನೀಡಲಾಗುತ್ತಿದೆ. ಸದರಿ ಕಾಲುವೆಗಳಿಂದ ಅನದಿಕೃತವಾಗಿ ಹೊಲಗಳಿಗೆ ನೀರು ಹರಿಸುವುದು ಹಾಗೂ ಪಂಪ್ ಸೆಟ್ – ತೂಬುಗಳ ಮೂಲಕ ನೀರು ಎತ್ತುವಳಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಫೆ. 19 ರಿಂದ ಫೆ. 26 ರವರೆಗೆ ಭದ್ರಾ ನಾಲಾ ಮತ್ತು ನದಿ ಪಾತ್ರದ ಪ್ರದೇಶಗಳ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.