
ಭದ್ರಾವತಿ ಎಂಪಿಎಂ ಕಾರ್ಖಾನೆ ಪುನಾರಾರಂಭ ಕುರಿತಂತೆ ಸಚಿವರುಗಳ ಮಹತ್ವದ ಸಭೆ
ಶಿವಮೊಗ್ಗ, ಫೆ. 22: ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ (bhadravathi mpm factory) ಪುನಾರಾರಂಭ ಕುರಿತಂತೆ, ಬುಧವಾರ ಸಂಜೆ ಮೂವರು ಪ್ರಮುಖ ಸಚಿವರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಶಿವಮೊಗ್ಗ (shimoga) ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (madhu bangarappa) ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಬೆಂಗಳೂರಿನ ವಿಧಾನಸೌಧದ ಮೂಲಕ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಖಾನೆ ಪುನಶ್ಚೇತನ ಕುರಿತಂತೆ ಮಹತ್ವದ ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಬೆಂಗಳೂರಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಭದ್ರಾವತಿ ಕ್ಷೇತ್ರದ ಶಾಸಕರೂ ಆದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಬಿ.ಕೆ.ಸಂಗಮೇಶ್, ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಅರಣ್ಯ ಇಲಾಖೆ ಅಧಿಕಾರಿ ಶಿವಶಂಕರ್, ಎಂಪಿಎಂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಚರ್ಚೆಯೇನು?: ಎಂಪಿಎಂ ಕಾರ್ಖಾನೆ ಅಧೀನದಲ್ಲಿ ಸುಮಾರು 20,000 ಹೆಕ್ಟೇರ್ ಭೂಮಿ ಗುತ್ತಿಗೆ ಆಧಾರದಲ್ಲಿದೆ. ಸದರಿ ಪ್ರದೇಶದಲ್ಲಿ ನೀಲಗಿರಿ ಮರಗಳನ್ನು ಬೆಳೆಸಿದಲ್ಲಿ ಕಾರ್ಖಾನೆಗೆ ಬೇಕಾಗುವ ಮೂಲ ಕಚ್ಚಾ ವಸ್ತುವಿನ ಕೊರತೆ ನೀಗಲು ಸಾಧ್ಯ ಎಂದು ಎಂಪಿಎಂ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಆದರೆ ನೀಲಗಿರಿ ಮರಗಳನ್ನು ಬೆಳೆಸುವುದಕ್ಕೆ ನಿಷೇಧ ಇರುವುದರಿಂದ, ಸದರಿ ನಿಷೇಧ ತೆರವುಗೊಳಿಸುವ ಬಗ್ಗೆ ತಜ್ಞರ ಸಮಿತಿ ರಚಿಸಿ ವರದಿ ಪಡೆದು ಮುಂದಿನ ಕ್ರಮಕೈಗೊಳ್ಳಲು ಸಚಿವರುಗಳು ತೀರ್ಮಾನಿಸಿದರು.
ಎಂಪಿಎಂ ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಸ್ಥಳೀಯ ಸಾರ್ವಜನಿಕರ ಹಾಗೂ ನೌಕರರ ಆರ್ಥಿಕ ಶಕ್ತಿ ವೃದ್ಧಿಗೊಳಿಸಲು ಸಹಾಯ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಇದೇ ವೇಳೆ ಕೈಗಾರಿಕಾ ಸಚಿವರಿಗೆ ಮನವಿ ಮಾಡಿದರು.